ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್ ನಂಟು ಕಾರಣ ಸದ್ಯ ಸಿಸಿಬಿಯ ಹಿರಿಯಾಧಿಕಾರಿಗಳಾದ ಸಂದೀಪ್ ಪಾಟೀಲ್ ಹಾಗೂ ಡಿಸಿಪಿ ರವಿ ಕುಮಾರ್ ತನಿಖೆ ಚುರುಕುಗೊಳಿಸಿದ್ದು, ಇಂದು ಸಿಸಿಬಿ ಕಚೇರಿಗೆ ಮುಂಜಾನೆ 10 ಗಂಟೆ ಸುಮಾರಿಗೆ ನಟಿ ಬೆಡಗಿ ರಾಗಿಣಿ ದ್ವಿವೇದಿ ಹಾಗೂ 11 ಗಂಟೆಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿಚಾರಣೆಗೆ ಹಾಜರಾಗಲಿದ್ದಾರೆ.
ಮಾದಕ ವಸ್ತು ಜಾಲ ಸಂಬಂಧ ರಾಗಿಣಿ ಸ್ನೇಹಿತ ಸಾರಿಗೆ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ರವಿ ಶಂಕರ ಎಂಬಾತನನ್ನು ಸಿಸಿಬಿ ವಶಕ್ಕೆ ಪಡೆದು ತನಿಖೆ ಮಾಡಿದ ನಂತರ ರಾಗಿಣಿ ದ್ವಿವೇದಿಗೆ ನೋಟಿಸ್ ಜಾರಿ ಮಾಡಲಾಗಿದೆ. ಇಂದು ಸಿಸಿಬಿ ಅಧಿಕಾರಿಗಳ ಎದುರು ರಾಗಿಣಿ ವಿಚಾರಣೆಗೆ ಹಾಜರಾಗಲಿದ್ದು, ಪಬ್, ಪಂಚತಾರಾ ಹೋಟೆಲ್ ಪಾರ್ಟಿ, ಹೊರವಲಯದ ರೆಸಾರ್ಟ್ ಬಗ್ಗೆ ಸಿಸಿಬಿ ರಾಗಿಣಿಯಿಂದ ಮಾಹಿತಿ ಪಡೆಯಲಿದೆ.
ಇಂದ್ರಜಿತ್ ಲಂಕೇಶ್ಗೆ ಸರಿಯಾದ ದಾಖಲೆ ಕೊಡುವಂತೆ ಸಿಸಿಬಿ ಎರಡನೇ ಬಾರಿಗೆ ನೋಟಿಸ್ ಜಾರಿ ಮಾಡಿದ್ದು, ಇಂದು ಮತ್ತಷ್ಟು ದಾಖಲೆಗಳನ್ನ ನೀಡುವ ಸಾಧ್ಯತೆ ಇದೆ. ಇಂದ್ರಜಿತ್ ಸ್ಯಾಂಡಲ್ವುಡ್ ಡ್ರಗ್ಸ್ ಸಂಬಂಧ ಕೆಲ ಮಾಹಿತಿ ಕೊಡುತ್ತೇನೆಂದು ಮೊನ್ನೆ ಸಿಸಿಬಿಗೆ ಬಂದಿದ್ದರು. ಸರಿಯಾದ ದಾಖಲೆಗಳನ್ನ ಕೊಟ್ಟಿಲ್ಲದ ಕಾರಣ ಮತ್ತೆ ಬುಲಾವ್ ನೀಡಲಾಗಿದೆ ಎನ್ನಲಾಗಿದೆ.