ಆನೇಕಲ್: ವಸೂಲಿ ವಿಚಾರಕ್ಕೆ ಮಂಗಳಮುಖಿಯರಿಂದ ಹಲ್ಲೆಗೊಳಗಾದ ವ್ಯಕ್ತಿ ಸಾವನ್ನಪ್ಪಿದ್ದು, ಕೊಲೆ ಪ್ರಕರಣದಲ್ಲಿ ಮೂವರು ಮಂಗಳಮುಖಿಯರನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.
ರಾಮನಗರ ಮೂಲದ ರಾಜೇಂದ್ರ ಮೃತ ವ್ಯಕ್ತಿಯಾಗಿದ್ದಾನೆ. ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯ ನೈಸ್ ರಸ್ತೆಯಲ್ಲಿ ಕಲೆಕ್ಷನ್ ಮಾಡುತ್ತಿದ್ದ ರಾಜೇಂದ್ರನ ಮೇಲೆ ಮಂಗಳ ಮುಖಿಯರು ಸಿಟ್ಟಾಗಿದ್ದರು. ಬೆಳಗಿನ ಜಾವದಲ್ಲಿ ಗಾರ್ಮೆಂಟ್ಸ್ ಕೆಲಸ ಮಾಡುತ್ತಿದ್ದ ರಾಜೇಂದ್ರ ರಾತ್ರಿ ಮಂಗಳ ಮುಖಿಯರಂತೆ ಸೀರೆ ತೊಟ್ಟು ಕಲೆಕ್ಷನ್'ಗೆ ನೈಸ್ ರಸ್ತೆಗಿಳಿಯುತ್ತಿದ್ದ.
ಈ ವಿಚಾರ ತಿಳಿದುಕೊಂಡ ಮಂಗಳಮುಖಿಯರಾದ ದೇವಿ ಮತ್ತು ಭಾವನ ನಿಗದಿತ ಏರಿಯಾದಲ್ಲಿ ಕಲೆಕ್ಷನ್ ಮಾಡುತ್ತಿರುವಾಗ ಗಲಾಟೆ ತೆಗೆದಿದ್ದರು. ನಂತರ ಕಳೆದ ಶುಕ್ರವಾರ ರಾತ್ರಿ ರಾಜೇಂದ್ರನ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆ ತೀವ್ರತೆಯಿಂದಾಗಿ ರಾಜೇಂದ್ರ ಮೃತಪಟ್ಟಿದ್ದ.
ಶುಕ್ರವಾರ ರಾತ್ರಿಯೇ ಆರೋಪಿಗಳು ರಾಜೇಂದ್ರನ ಮೃತದೇಹವನ್ನು ರಾಮನಗರ ಆಸ್ಪತ್ರೆಗೆ ಕೊಂಡೊಯ್ದಿದ್ದರು. ಅದರಲ್ಲೂ ಅನಾಥ ಶವ ಎಂದು ಬಿಂಬಿಸಿದ್ದರು. ನಂತರ ಆಸ್ಪತ್ರೆಯ ಸಿಬ್ಬಂದಿಯಿಂದ ರಾಮನಗರ ಠಾಣೆಗೆ ಮಾಹಿತಿ ಹೋಗಿತ್ತು.
ಈ ಕುರಿತು ರಾಮನಗರ ಪೊಲೀಸರು ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದರಿಂದ ಇದೀಗ ಮೂವರು ಆರೋಪಿಗಳನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.