ಬೆಂಗಳೂರು: ಆನ್ಲೈನ್ನಲ್ಲಿ ಆಸ್ತಿ ನೋಂದಣಿಗೆ ಅವಕಾಶ ಮಾಡಿಕೊಡುವ ಕಾವೇರಿ ತಂತ್ರಾಂಶ ತಿರುಚಿದ ಆರೋಪದ ಸಂಬಂಧ ಮೂವರು ಹಿರಿಯ ಸಬ್ ರಿಜಿಸ್ಟ್ರಾರ್ಗಳನ್ನು ಅಮಾನತುಗೊಳಿಸಿ ಮೂವರ ವಿರುದ್ಧ ಇಲಾಖಾ ತನಿಖೆಗೆ ನೋಂದಣಿ ಹಾಗೂ ಮುದ್ರಾಂಕ ಇಲಾಖೆ ಆದೇಶ ಹೊರಡಿಸಿದೆ.
ಮಾದನಾಯಕನಹಳ್ಳಿ ಹಿರಿಯ ಉಪನೋಂದಣಾಧಿಕಾರಿ ಲಲಿತಾ ಅಮೃತೇಶ್, ಜಾಲ ಹಿರಿಯ ಉಪನೋಂದಣಾಧಿಕಾರಿ ರಾಮಪ್ರಸಾದ್ ಹಾಗೂ ದಾಸನಪುರ ಹಿರಿಯ ಉಪನೋಂದಣಾಧಿಕಾರಿ ಮಧುಕುಮಾರ್ ಅವರನ್ನು ಅಮಾನತು ಮಾಡಿ ಇಲಾಖೆಯ ಐಜಿಆರ್ ಮೋಹನ್ ರಾಜ್ ಆದೇಶ ಹೊರಡಿಸಿದ್ದಾರೆ. ಆದೇಶದಂತೆ ನೋಂದಣಿ ಇಲಾಖೆ ಮುಖ್ಯ ಕಚೇರಿಗೆ ಪ್ರತಿ ನಿತ್ಯ ಬಂದು ರಿಪೋರ್ಟ್ ಮಾಡಿಕೊಳ್ಳಬೇಕು ಎಂದು ಹೇಳಿದೆ.
ಅಮಾನತುಗೊಂಡ ಅಧಿಕಾರಿಗಳು ಏಪ್ರಿಲ್ 24 ರಿಂದ ಮೇ 17ರ ವೇಳೆ ಹಣ ಪಡೆದು ಕಾವೇರಿ ಇ-ಸ್ವತ್ತು ಪಡೆಯದೇ ಕೆಲವು ಆಸ್ತಿಗಳ ನೋಂದಣಿ ಮಾಡಿದ್ದು, ಕೆಲವೊಂದು ಆಸ್ತಿಗಳಿಗೆ ಇ ಖಾತೆ ಇಲ್ಲದಂತೆ ಆಸ್ತಿ ನೋಂದಣಿ ಮಾಡಿದ್ದಾರೆ. ಕಾವೇರಿ ತಂತ್ರಜ್ಞಾನದಲ್ಲಿ ಸುಳ್ಳು ಮಾಹಿತಿ ದಾಖಲಿಸಿದ್ದಾರೆ. ಈ ಬಗ್ಗೆ ಜಿಲ್ಲಾ ನೋಂದಣಾಧಿಕಾರಿ ನಡೆಸಿದ ತನಿಖೆ ವೇಳೆ ತಿಳಿದು ಬಂದಿದೆ ಎನ್ನಲಾಗ್ತಿದೆ.
ಅಲ್ಲದೆ ಜಾಗದ ಮಾಲೀಕರಿಗೆ ಮುಂದೆ ಆಸ್ತಿ ಮಾರಾಟದ ವೇಳೆ ಅಧಿಕ ಲಾಭ ಸಿಗುವಂತೆ ಮಾಡಲು ಕೆಲವೊಂದು ಗ್ರಾಮೀಣ ಪ್ರದೇಶದ ಆಸ್ತಿಗಳನ್ನು ಬಿಬಿಎಂಪಿ ವ್ಯಾಪ್ತಿಯ ಆಸ್ತಿ ಎಂದು ಉಲ್ಲೇಖ ಮಾಡಿರುವ ಅಂಶ ಕೂಡ ಬಯಲಾಗಿದೆ.
ಕಳೆದ ವರ್ಷದ ಡಿಸೆಂಬರ್ 7 ರಿಂದ 18ರವರೆಗೆ ಕಾವೇರಿ ವೆಬ್ಸೈಟ್ನಲ್ಲಿ ಸುಮಾರು 400ಕ್ಕೂ ಹೆಚ್ಚು ಬಾರಿ ತಿರುಚಿದ್ದಾರೆ ಎಂದು ವೆಬ್ಸೈಟ್ ನಿರ್ವಹಿಸುವ ಪುಣೆಯ ಸಿ-ಡ್ಯಾಕ್ ಸಂಸ್ಥೆಯು ಇಲಾಖೆಗೆ ವರದಿ ನೀಡಿತ್ತು. ಇದರಂತೆ ವರದಿ ಆಧರಿಸಿ ಇಲಾಖೆಯ ಅಂದಿನ ಮಹಾನಿರೀಕ್ಷಕರಾಗಿದ್ದ ತ್ರಿಲೋಕ್ ಚಂದ್ರ ಅವರು ಆಂತರಿಕ ತನಿಖಾ ಸಮಿತಿ ರಚಿಸಿದ್ದರು.
ಇದಾದ ಬಳಿಕವಷ್ಟೇ ನಗರ ಸೈಬರ್ ಕ್ರೈಂ ಠಾಣೆಗೆ ನೀಡಿದ ದೂರಿನಲ್ಲಿ ಕೃಷಿ ಜಮೀನುಗಳನ್ನು ಅಕ್ರಮವಾಗಿ ರೆವಿನ್ಯೂ ಸೈಟ್ ಗಳಾಗಿ ಪರಿವರ್ತಿಸಿ ಕಾವೇರಿ ವೆಬ್ಸೈಟ್ ತಮಗೆ ಬೇಕಾದ ರೀತಿಯಲ್ಲಿ 400ಕ್ಕೂ ಹೆಚ್ಚು ಬಾರಿ ತಿರುಚಿದ್ದಾರೆ. ಈ ಮೂಲಕ ಸರ್ಕಾರದ ಖಜಾನೆಗೆ ಕೋಟ್ಯಂತರ ರೂ.ತೆರಿಗೆ ವಂಚಿಸಿರುವುದು ಬೆಳಕಿಗೆ ಬಂದಿತ್ತು.
ದೂರಿನ್ವನಯ ಆನೇಕಲ್, ದಾಸನಪುರ, ಪೀಣ್ಯ, ಮಾದನಾಯಕನಹಳ್ಳಿ, ಲಗ್ಗೆರೆ, ಕೆಂಗೇರಿ, ತಾವರೆಕೆರೆ, ಹೊಸಕೋಟೆ, ಬ್ಯಾಟರಾಯನಪುರ ಹಾಗೂ ಬಿಡಿಎ ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿ ಒಟ್ಟು 12 ಸಬ್ ರಿಜಿಸ್ಟ್ರಾರ್ಗಳಿಗೆ ವಿಚಾರಣೆ ಹಾಜರಾಗುವಂತೆ ಸಿಸಿಬಿ ನೊಟೀಸ್ ಜಾರಿ ಮಾಡಿತ್ತು.