ಬೆಂಗಳೂರು: ವಿಧಾನಪರಿಷತ್ನಲ್ಲಿ ಇಂದು ನಡೆದ ಘಟನೆಗೆ ಮೂರೂ ಪಕ್ಷದ ಸದಸ್ಯರು ಜವಾಬ್ದಾರಿ ಎಂದು ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯದ ನೋಟಿಸ್ ನೀಡಲಾಗಿತ್ತು. ಅದರ ಬಗ್ಗೆ ಚರ್ಚೆ ಸದನದಲ್ಲಿ ಆಗಬೇಕಿತ್ತು, ಅದು ಉಲ್ಲಂಘನೆಯಾಗಿದೆ. ಸಭಾಪತಿಗಳ ಮೇಲೆ ಬಹುಮತ ಇದೆ ಅಥವಾ ಇಲ್ಲ ಎನ್ನುವುದು ಸದನದಲ್ಲಿ ಚರ್ಚೆ ಆಗಬೇಕು ಎನ್ನುವುದನ್ನು ಎಲ್ಲಾ ನಿಯಮಗಳು ಹೇಳುತ್ತವೆ. ಆ ರೀತಿ ನಡೆದುಕೊಂಡಿದ್ದರೆ ಇಂದಿನ ಘಟನೆಗಳು ಸಂಭವಿಸುತ್ತಿರಲಿಲ್ಲ ಎಂದರು.
ಸರ್ಕಾರದ ಸೂಚನೆ ಮೇರೆಗೆ ಸಭಾಪತಿಗಳು ಕಲಾಪವನ್ನು ಕರೆದಿದ್ದರು. ಅವರು ಕಾರ್ಯಕಲಾಪ ಪಟ್ಟಿಯಲ್ಲಿ ಅವಿಶ್ವಾಸ ಕುರಿತ ವಿಷಯವನ್ನು ಸೇರಿಸಿಲ್ಲ ಎನ್ನುವ ಕಾರಣಕ್ಕೆ ಈ ಬೆಳವಣಿಗೆ ನಡೆದಿದೆ. ಇವತ್ತು ನಡೆದ ಎಲ್ಲ ಘಟನೆಗಳು ಹಿರಿಯರ ಸದನಕ್ಕೆ ಅಗೌರವ ತರುವ ಘಟನೆಗಳಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಓದಿ: ವಿಧಾನಪರಿಷತ್ನಲ್ಲಿ ಕೈ-ಕಮಲ ಸದಸ್ಯರ ನಡುವೆ ತಳ್ಳಾಟ-ನೂಕಾಟ
ರಾಜ್ಯಪಾಲರನ್ನು ಬಿಟ್ಟರೆ ನಂತರದ ಹುದ್ದೆ ವಿಧಾನಪರಿಷತ್ ಸಭಾಪತಿ ಪೀಠದ್ದು, ಆ ಪೀಠದ ಗೌರವವನ್ನು ಕಾಯುವ ಕೆಲಸವನ್ನು ನಾವೆಲ್ಲ ಮಾಡಬೇಕಿತ್ತು. ಆದರೆ ಇಂದು ಕೆಟ್ಟ ಸಂದೇಶವನ್ನು ಇಡೀ ದೇಶಕ್ಕೆ ರವಾನಿಸಿಬಿಟ್ಟೆವು, ಇವತ್ತಿನ ಈ ಘಟನೆಗೆ ಮೂರು ಪಕ್ಷದ ಸದಸ್ಯರು ಜವಾಬ್ದಾರಿಯನ್ನು ಹೊರಬೇಕಿದೆ ಎಂದರು.