ಬೆಂಗಳೂರು: ರಾಜ್ಯದೆಲ್ಲೆಡೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಮನೆಗೆ ನುಗ್ಗಿ ಕಾರುಗಳಿಗೆ ಬೆಂಕಿ ಇಟ್ಟ ಪ್ರಕರಣ ಸಂಬಂಧ ನಗರದ ಆಗ್ನೇಯ ವಿಭಾಗದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನೇಪಾಳ ಮೂಲದ ಗಾರ್ವೇಭಾವಿಪಾಳ್ಯದ ಸಾಗರ್ ಹಾಗೂ ಬೇಗೂರಿನ ಶ್ರೀಧರ್ ಗೌಡ, ಬಂಡೆಪಾಳ್ಯ ನಿವಾಸಿ ನವೀನ್ ಕಾಳಪ್ಪ ಬಂಧಿತ ಆರೋಪಿಗಳು. ಆರೋಪಿಗಳೆಲ್ಲರೂ 19 ರಿಂದ 22 ವರ್ಷದ ವಯಸ್ಸಿನವರಾಗಿದ್ದಾರೆ. ಮೂವರು ಆರೋಪಿಗಳು ಪರಸ್ಪರ ಸ್ನೇಹಿತರಾಗಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಸಾಗರ್ ಕೊರೊನಾ ಬಿಕ್ಕಟ್ಟಿನಿಂದ ಕೆಲಸ ಕಳೆದುಕೊಂಡಿದ್ದ. ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದರೂ ಕೆಲಸ ಸಿಕ್ಕಿರಲಿಲ್ಲ. ಉದ್ಯೋಗ ಕೇಳಲು ಶಾಸಕರ ಭೇಟಿಗೆ ಮೂರು ಭಾರಿ ಪ್ರಯತ್ನಿಸಿ ಹತಾಶನಾಗಿದ್ದ. ಅಲ್ಲದೆ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ವಾಸವಾಗಿದ್ದ ಆರೋಪಿ ಸಾಗರ್‌ಗೆ ಸತೀಶ್ ರೆಡ್ಡಿ ವಿವಿಧ ಕಂಪನಿಗಳ ಕಾರಿನಲ್ಲಿ ಓಡಾಡುವುದನ್ನು ಗಮನಿಸಿದ್ದ.
'ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ'
ಶಾಸಕರ ಶ್ರೀಮಂತಿಕೆ ಕಂಡು ಕೆಂಡಮಂಡಲವಾಗಿದ್ದ. ತನ್ನ ಇಬ್ಬರು ಸ್ನೇಹಿತರ ಬಳಿ ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ. ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದ. ಅಲ್ಲದೆ ಶಾಸಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಬಳಿಕ ಮೂವರು ಸೇರಿಕೊಂಡು ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಇಡಲು ತೀರ್ಮಾನಿಸಿದ್ದರು ಎಂದು ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್ ಮಾಹಿತಿ ನೀಡಿದ್ದಾರೆ.
ಹಲವು ದಿನಗಳ ಹಿಂದೆ ಆರೋಪಿಗಳು ಕೃತ್ಯ ಎಸಗಲು ಸಂಚು ರೂಪಿಸಿದ್ದರು. ಅದರಂತೆ ಮದ್ಯ ಸೇವಿಸಿ ಆಗಸ್ಟ್ 11 ರಂದು ಮಧ್ಯರಾತ್ರಿ ಬೇಗೂರಿನಲ್ಲಿರುವ ಶಾಸಕರ ಮನೆ ಹಿಂಭಾಗದ ಗೇಟು ಹಾರಿ ಮನೆಯಂಗಳದಲ್ಲಿ ನಿಲ್ಲಿಸಿದ್ದ ಫಾರ್ಚೂನರ್ ಸೇರಿದಂತೆ ಎರಡು ಕಾರುಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದರು. ವಾಹನಕ್ಕೆ ಬೆಂಕಿ ಹಚ್ಚುವಾಗ ಆರೋಪಿ ನವೀನ್‌ಗೆ ಗಾಯವಾಗಿತ್ತು. ಮೂವರು ಆರೋಪಿಗಳು ತಲೆಮರೆಸಿಕೊಳ್ಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕೃತ್ಯದ ಬಳಿಕ ಆರೋಪಿಗಳು ಸುಮಾರು ಒಂದೂವರೆ ಕೀ.ಮೀ ಗಲ್ಲಿ ಗಲ್ಲಿ ಸುತ್ತಿದ್ದಾರೆ. ನಂತರ ಒಂದು ಬೈಕ್ ಕದ್ದು ತಪ್ಪಿಸಿಕೊಂಡಿದ್ದಾರೆ ಎಂದು ಆಯುಕ್ತರು ತಿಳಿಸಿದ್ದಾರೆ.
ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದ ಓರ್ವ ಬಂಧಿತ
ಕಾರುಗಳಿಗೆ ಬೆಂಕಿ ಹಚ್ಚಿದ ಘಟನೆ ಗೊತ್ತಾಗುತ್ತಿದ್ದಂತೆ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ರು. ಕೆಲವು ಸಿಸಿಟಿವಿ ದೃಶ್ಯಾವಳಿ ವಶಕ್ಕೆ ಪಡೆದುಕೊಂಡು ನೋಡಿದಾಗ ಸೆರೆಯಾದ ದೃಶ್ಯಾವಳಿ ಆರೋಪಿಗಳ ಮುಖ ಚಹರೆ ಸರಿಯಾಗಿ ಕಾಣಿಸುತ್ತಿರಲಿಲ್ಲ. ಆರೋಪಿಗಳ ಬಗ್ಗೆ ಜನರ ಬಳಿ ಮಾಹಿತಿ ಪಡೆಯಲಾಗಿತ್ತು. ಈ ಸಂಬಂಧ ಓರ್ವನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದ. ಈತ ನೀಡಿದ ಸುಳಿವಿನ ಮೇರೆಗೆ ಮತ್ತಿಬ್ಬರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಗೆ ಯಾವುದೇ ಅಪರಾಧ ಹಿನ್ನೆಲೆಯಿಲ್ಲ ಎಂಬುವುದು ಗೊತ್ತಾಗಿದೆ. ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ. ಆರೋಪಿಗಳ ಬಂಧನಕ್ಕೆ ಶ್ರಮಿಸಿದ ವಿಶೇಷ ತನಿಖಾ ತಂಡಕ್ಕೆ ಆಯುಕ್ತರು ಒಂದು ಲಕ್ಷ ಬಹುಮಾನ ಘೋಷಣೆ ಮಾಡಿದರು.
ಇದನ್ನೂ ಓದಿ: ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಹಚ್ಚಿ ಪರಾರಿಯಾದ ಕಿರಾತಕರು - CCTVಯಲ್ಲಿ ದುಷ್ಕೃತ್ಯ ಸೆರೆ