ಬೆಂಗಳೂರು: ನಾನು ಮತ್ತು ನನ್ನ ಕುಟುಂಬದ ಬಗ್ಗೆ ನನ್ನ ಹೆಂಡತಿ, ಮಗ, ಸೊಸೆಯನ್ನು ನಿಂದಿಸಿ ಅನಾಮಿಕ ವ್ಯಕ್ತಿಯೊಬ್ಬ ಬೆದರಿಕೆ ಪತ್ರ ಬರೆದಿದ್ದಾನೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಾನು ಕಾಂಗ್ರೆಸ್ನ ಅಧಿಕೃತ ವಕ್ತಾರ. ಸಂವಿಧಾನದ ಆಶಯ, ವಾಲ್ಮೀಕಿ ರಾಮಾಯಣದ ಮೇಲೆ ನಂಬಿಕೆ ಬದ್ಧತೆ ಇರುವವನು. ನನ್ನ ಮಾತುಗಳನ್ನು ಸಹಿಸದ ಮತೀಯವಾದಿಗಳು, ನಿನ್ನೆ ಮಹಾಲಕ್ಷ್ಮಿ ಪುರಂನಿಂದ ಬೆದರಿಕೆ ಪತ್ರ ಬರೆದಿದ್ದಾರೆ ಎಂದರು.
ಹಿಂದುತ್ವದ ಬಗ್ಗೆ ನಾನು ಸಾರ್ವಜನಿಕವಾಗಿ ಚರ್ಚೆಗೆ ಸಿದ್ಧನಿದ್ದೇನೆ. ಈ ರೀತಿಯಲ್ಲಿ ಪತ್ರದ ಮೂಲಕ ಬೆದರಿಕೆ ಹಾಕುವುದು ಬೇಡ. ನಾನೂ ಒಬ್ಬ ಹಿಂದು ಎಂದು ತಿಳಿಸಿದರು.
ನಾನು ಹಿಂದು ಅಲ್ಲ ಅಂತ, ಪ್ರಚೋದನೆ ಮಾಡುವುದಕ್ಕೆ ಧರ್ಮ ಧರ್ಮದ ನಡುವೆ ಸಂಘರ್ಷ ಮೂಡಿಸುವ ರೀತಿಯಲ್ಲಿ ಪತ್ರ ಬರೆದಿದ್ದಾರೆ. ನನಗೆ ಪ್ರಾಣಭಯ ಉಂಟುಮಾಡುವ ದೃಷ್ಟಿಯಲ್ಲಿ ಪತ್ರ ಬರೆದಿದ್ದಾರೆ. ಈ ಕೃತ್ಯದ ಬಗ್ಗೆ ಗೃಹ ಸಚಿವರಿಗೆ , ಕಮಿಷನರ್ ಕಚೇರಿಗೆ ಭೇಟಿ ನೀಡಿ, ದೂರು ಕೊಟ್ಟಿದ್ದೇನೆ. ಕಮಿಷನರ್ ಕೂಡಲೇ ದೂರು ದಾಖಲು ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.
ಪ್ರಜಾತಂತ್ರದ ಕಗ್ಗೊಲೆ ಆಗ್ತಿದೆ:
ರಾಜ್ಯದಲ್ಲಿ ವ್ಯವಸ್ಥಿತವಾಗಿ ಪ್ರಜಾತಂತ್ರ ವ್ಯವಸ್ಥೆಯನ್ನು ಕೊಲೆ ಮಾಡುತ್ತಿದ್ದಾರೆ ಎಂದು ಉಗ್ರಪ್ಪ ಕಿಡಿಕಾರಿದರು. ಗ್ರಾಮ ಪಂಚಾಯಿತಿ ಚುನಾವಣೆ ನಡೆಯದ ಹಾಗೆ ಮಾಡಿದ್ದಾರೆ. ಸಂವಿಧಾನದ ಪ್ರಕಾರ ಕಡ್ಡಾಯವಾಗಿ 5 ವರ್ಷಕ್ಕೆ ಒಂದು ಬಾರಿ ಚುನಾವಣೆ ಮಾಡಬೇಕು. ಆದರೆ ಅದನ್ನು ಮುಂದೂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ವಿಧಾನಸಭೆಯ ಸ್ಪೀಕರ್ ಅವರ ನೇತೃತ್ವದಲ್ಲಿ ಸಮಿತಿಗಳನ್ನು ರಚನೆ ಮಾಡುತ್ತಾರೆ. ಪಬ್ಲಿಕ್ ಅಕೌಂಟ್ ಕಮಿಟಿಯ ಸ್ಥಳ ಭೇಟಿಗೆ ತಡೆಯಾಜ್ಞೆ ನೀಡಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆ. ಸಂವಿಧಾನ ದತ್ತವಾದ ಸ್ಥಾನವನ್ನು ಸ್ಪೀಕರ್ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.