ಬೆಂಗಳೂರು: ಮುಂದಿನ ಪಾಲಿಕೆ ಬಜೆಟ್‌ನಲ್ಲಿ ಛಾಯಾಗ್ರಾಹಕರ ಸಂಘಕ್ಕೆ ಅನುದಾನ ನೀಡುವ ಬಗ್ಗೆ ಹಣಕಾಸು ವಿಭಾಗದ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಮತ್ತು ಪಾಲಿಕೆಯಿಂದ ಛಾಯಾಗ್ರಾಹಕರಿಗೆ ಆರೋಗ್ಯ ಚೀಟಿ (ಹೆಲ್ತ್ ಕಾರ್ಡ್) ವಿತರಿಸುವ ಬಗ್ಗೆಯೂ ಚರ್ಚೆ ಮಾಡಲಾಗುವುದು ಎಂದು ಮೇಯರ್ ಗಂಗಾಂಬಿಕೆ ಆಶ್ವಾಸನೆ ನೀಡಿದರು.
ಛಾಯಾಗ್ರಾಹಕರ ಸಂಘವು ಸೋಮವಾರ ಆಯೋಜಿಸಿದ್ದ ‘ವಿಶ್ವ ಛಾಯಾಗ್ರಾಹಕರ ದಿನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಛಾಯಾಗ್ರಾಹಕರಿಂದ ನಮ್ಮ ಜೀವನದ ಮರೆಯಲಾರದ ಕ್ಷಣಗಳು ಸೆರೆಯಾಗುತ್ತವೆ. ಇದು ಎಷ್ಟೇ ವರ್ಷಗಳು ಕಳೆದರೂ ಛಾಯಾಚಿತ್ರಗಳು ಹಳೆಯ ನೆನೆಪುಗಳಿಗೆ ಸಾಕ್ಷಿಯಾಗಿರುತ್ತವೆ. ಇಂತಹ ಅದ್ಭುತ ಕ್ಷಣಗಳನ್ನು ಸೆರೆ ಹಿಡಿಯುವ ಛಾಯಾಗ್ರಾಹಕರ ಸಂಕಷ್ಟಗಳ ಬಗ್ಗೆಯೂ ನನಗೆ ಅರಿವಿದೆ. ದಯವಿಟ್ಟು ನಿಮ್ಮ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತಂದು ಅವುಗಳನ್ನು ಬಗೆಹರಿಸಿಕೊಳ್ಳಬಹುದು ಎಂದರು.
ಪಾಲಿಕೆ ಉಪ ಮೇಯರ್ ಭದ್ರೇಗೌಡ, ಹವ್ಯಾಸಿ ಛಾಯಾಗ್ರಾಹಕರಿಗೆ ಹೋಲಿಸಿದರೆ ಪತ್ರಿಕಾ ಛಾಯಾಗ್ರಾಹಕರಿಗೆ ಸ್ವಾತಂತ್ರ್ಯ ಕಡಿಮೆ ಇರುತ್ತದೆ. ಅವರು ತಮ್ಮ ಕುಟುಂಬದವರ ಸಮಸ್ಯೆಗಳಿಗೆ ಸ್ಪಂದಿಸಲು ಹೆಚ್ಚು ಸಮಯವೂ ಇರುವುದಿಲ್ಲ. ಅವರಿಗೆ ಆರ್ಥಿಕ ಸಮಸ್ಯೆ ಹೆಚ್ಚಾಗಿದ್ದು, ಇವರಿಗೆ ನೆರವು ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು ಎಂದರು.
ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ತಂತ್ರಜ್ಞ ನರಸಿಂಹ ಅವರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.