ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಮೀಸಲಾತಿಗೆ ಆಗ್ರಹಿಸಿ ಸಮುದಾಯಗಳಿಂದ ಹೋರಾಟ ನಡೆಯುತ್ತಿವೆ. ಮೀಸಲಾತಿ ಹೋರಾಟ ಮಾಡುತ್ತಿರುವವರು ಒಂದು ಕ್ಷಣ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ನಿಜವಾದ ಬಡವರು ಇರುವ ಸಮುದಾಯಕ್ಕೆ ಮೀಸಲಾತಿ ಸಿಗಬೇಕು ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದ್ದಾರೆ.
ದೊಡ್ಡಬಳ್ಳಾಪುರದ ಹೊಸಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಗ್ರಾಮ ವಾಸ್ತವ್ಯ ಹೂಡಿದ ಆರ್. ಅಶೋಕ ಮಾಧ್ಯಮದೊಂದಿಗೆ ಮಾತನಾಡಿದರು. ಇರೋದು ಒಂದೇ ರೊಟ್ಟಿ ಕೇಳುತ್ತಿರುವುದು ನೂರಾರು ರೊಟ್ಟಿಯನ್ನ. ಸಮಾಜ ನಮ್ಮದೇ, ಬೇರೆಯವರ ಅನ್ನಕ್ಕೆ ಕೈ ಹಾಕಬಾರದು. 2ಎ, ಎಸ್ಸಿ ಮತ್ತು ಎಸ್ಟಿಗೆ ಸೇರಿಸುವಂತೆ ಹೋರಾಟ ನಡೆಯುತ್ತಿದೆ. ತುಳಿತಕ್ಕೆ ಒಳಗಾದ ಸಮುದಾಯದ ಮೀಸಲಾತಿ ಕಿತ್ತು ಮತ್ತೊಂದು ಸಮುದಾಯಕ್ಕೆ ಕೊಡುವುದು ಒಳ್ಳೆಯದಲ್ಲ. ಯಾರು ತುಳಿತಕ್ಕೆ ಒಳಗಾಗಿದ್ದಾರೆ, ಯಾರಿಗೆ ಕೇಳುವ ಬಾಯಿಲ್ಲ, ಅರ್ಜಿ ಕೊಡುವ ಕೈಯಿಲ್ಲ ಅವರ ಧ್ವನಿಯಾಗುತ್ತೇನೆಂದು ಅಂಬೇಡ್ಕರ್ ಹೇಳಿದ್ರು. ಅವರ ಅಶಯ ಮಣ್ಣು ಪಾಲಾಗಬಾರದು. ಮೀಸಲಾತಿಗೆ ಹೋರಾಟ ಮಾಡುತ್ತಿರುವವರು ಒಂದು ಕ್ಷಣ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು ಎಂದರು.
ಓದಿ:ನೋಟಿಸ್ಗೆ ನಾ ಹೆದರಲ್ಲ, ನೀವು ಕುರ್ಚಿ ಬಿಡಬೇಕಾದೀತು: ಯತ್ನಾಳ್ ಗುಡುಗು
ಮೀಸಲಾತಿಗಾಗಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದ ಅಯೋಗದ ವರದಿಗಳು 30 ವರ್ಷಗಳಿಂದ ಹಾಗೆಯೇ ಇದೆ. ಮೀಸಲಾತಿಗಾಗಿ ಸ್ವಾಮೀಜಿಗಳು ಯಾವುದೇ ಗಡುವು ನೀಡಬಾರದೆಂದು ಕೈ ಮುಗಿದು ಮನವಿ ಮಾಡಿದರು. ಅಯೋಗಕ್ಕೆ ಸಮೀಕ್ಷೆ ನಡೆಸುವ ಅಧಿಕಾರವಿದೆ. ಅಯೋಗ ನೀಡುವ ವರದಿಯವರೆಗೂ ಕಾಯಬೇಕು. ಯಡಿಯೂರಪ್ಪ ಸಮರ್ಥರಿದ್ದು, ಸಮಸ್ಯೆಯನ್ನ ಬಗೆ ಹರಿಸುತ್ತಾರೆ. ತಮಿಳುನಾಡು, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಮೀಸಲಾತಿಯನ್ನ ನೀಡಲಾಗಿದ್ದು, ತುಳಿತಕ್ಕೆ ಒಳಗಾದವರಿಗೆ ಖಂಡಿತವಾಗಿಯೂ ಮೀಸಲಾತಿ ನೀಡುವ ಪ್ರಾಮಾಣಿಕ ಪ್ರಯತ್ನ ಸಿಎಂ ಮಾಡಲಿದ್ದಾರೆ ಎಂದರು.