ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ವೇಗ ನೀಡಲಿದೆ. ಗುಡಿ, ಗೃಹ, ಸಣ್ಣ, ಮಧ್ಯಮ ಹಾಗೂ ಬೃಹತ್ ಕೈಗಾರಿಕೆಗಳ ಚೇತರಿಕೆಗೂ ಪೂರಕವಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅಭಿಪ್ರಾಯಪಟ್ಟಿದ್ದಾರೆ.
ಕೊರೊನಾ ಪ್ರೇರಿತ ಲಾಕ್ಡೌನ್ ವೇಳೆ ಇಂತಹ ಪ್ಯಾಕೇಜ್ ಅವಶ್ಯಕತೆ ಬಹಳಷ್ಟಿತ್ತು. ದಿಗ್ಬಂಧನದಿಂದ ತೊಂದರೆಗೆ ಒಳಗಾದ ಕೈಗಾರಿಕಾ ವಲಯದ ಚೇತರಿಕೆಗೆ ವಿಶೇಷ ಸೌಲಭ್ಯ ನೀಡುವುದು ಅಗತ್ಯವಾಗಿತ್ತು ಎಂದರು.
ಭಾರತ ಜಾಗತಿಕ ಶಕ್ತಿಯಾಗಿ ಬೆಳೆಯಲು ಈ ಪ್ಯಾಕೇಜ್ ಸದಾವಕಾಶ ಒದಗಿಸಲಿದೆ. ಸ್ಥಳೀಯ ಉತ್ಪಾದನೆಗೆ ಹೆಚ್ಚಿನ ಬಲ ನೀಡುವ ಮೂಲಕ ಆತ್ಮ ನಿರ್ಭರ ಭಾರತ್ ಯೋಜನೆಯು ದೇಶದ ಎಲ್ಲಾ ವರ್ಗದ ಅಭಿವೃದ್ಧಿಗೆ ಒತ್ತು ನೀಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.