ಬೆಂಗಳೂರು : ಅತ್ಯಂತ ಕಡಿಮೆ ಭೂಮಿಯಲ್ಲಿ ವಿವಿಧ ಕೃಷಿ ಪದ್ಧತಿ ಅಳವಡಿಕೆ ಮೂಲಕ ಹೆಚ್ಚಿನ ಆದಾಯ ಗಳಿಕೆ ಸಾಧ್ಯ ಎಂಬುದನ್ನು ಆಂಧ್ರಪ್ರದೇಶ ಮೂಲದ ರೈತರೊಬ್ಬರು ಸಾಧಿಸಿ ತೋರಿಸಿದ್ದಾರೆ.
ನಗರದ ಜಿಕೆವಿಕೆ ಆವರಣದಲ್ಲಿ ನಡೆದ 107ನೇ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶದಲ್ಲಿ ಇದೇ ಮೊದಲ ಬಾರಿಗೆ ಹಲವು ರೈತರಿಗೆ ತಮ್ಮ ಆವಿಷ್ಕಾರವನ್ನು ಪರಿಚಯಿಸಲು ಅವಕಾಶ ಮಾಡಿಕೊಡಲಾಗಿತ್ತು. ಈ ವೇಳೆ ಆಂಧ್ರಪ್ರದೇಶ ಗುಂಟೂರ್ ಮೂಲದ ಯುವ ರೈತ ರವಿಕಿರಣ್ ತಮ್ಮ ಕಡಿಮೆ ಪ್ರಮಾಣದ ಜಮೀನಿನಲ್ಲಿ ಕೃಷಿ ಮೂಲಕ ಮಾದರಿ ರೈತನಾಗಿ ಗುರುತಿಸಿಕೊಂಡಿದ್ದು, ತಮ್ಮ ಆವಿಷ್ಕಾರದ ಕುರಿತು 'ಈಟಿವಿ ಭಾರತ್'ನೊಂದಿಗೆ ಹಂಚಿಕೊಂಡಿದ್ದಾರೆ.
ನಾನು ಎರಡು ಎಕರೆ ಕೃಷಿ ಭೂಮಿಯಲ್ಲಿ ಒಂದು ಎಕರೆಯಲ್ಲಿ ಕೋಳಿ, ಮೀನು ಸಾಕಣೆ, ಮಾಡಿಕೊಂಡಿದ್ದು ಇನ್ನೊಂದು ಎಕರೆ ಪ್ರದೇಶದಲ್ಲಿ ಹಣ್ಣಿನ ತೋಟ ಅಭಿವೃದ್ಧಿಪಡಿಸಿದ್ದೇನೆ. ಈ ಕೃಷಿ ಪದ್ಧತಿ ಕೈ ಹಿಡಿದಿದ್ದು, ಸಾಕಷ್ಟು ಲಾಭ ತಂದುಕೊಟ್ಟಿದೆ. ಈ ಆದಾಯವನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಯುವಕರು ಈ ಪದ್ಧತಿಯನ್ನು ಅಳವಡಿಸಿಕೊಂಡರೆ ಬಹುಬೇಗ ಆದಾಯ ಗಳಿಸಬಹುದು ಎಂಬುದನ್ನು ಪ್ರಾಯೋಗಿಕವಾಗಿ ಸಾಬೀತುಪಡಿಸಿದ್ದೇನೆ. ಇದನ್ನೇ ಉಳಿದವರಿಗೂ ಸಲಹೆ ನೀಡುತ್ತೇನೆ ಎಂದರು.
ಬಳಿಕ ರವಿಕಿರಣ್ ಸ್ನೇಹಿತ ಜಗದೀಶ್ ಮಾತನಾಡಿ, ನಾವು ಗುಂಟೂರಿನ ಕೃಷಿ ವಿಜ್ಞಾನ ಕೇಂದ್ರದಿಂದ ಆಗಮಿಸಿದ್ದು, ಸಮಗ್ರ ಕೃಷಿ ಪದ್ಧತಿ ಮೂಲಕ ಇರುವ ಕಡಿಮೆ ಭೂಮಿಯಲ್ಲಿ ಹೆಚ್ಚಿನ ಬೆಳೆ ತೆಗೆದು ಆದಾಯಗಳಿಸುವ ವಿನೂತನ ಪದ್ಧತಿಯನ್ನು ಕಂಡುಕೊಂಡಿದ್ದೇವೆ. ಕೋಳಿ, ಮೀನು ಹಾಗೂ ಪಶುಸಂಗೋಪನೆ ಜೊತೆಗೆ ಕೃಷಿ ಚಟುವಟಿಕೆಯನ್ನು ಒಂದೇ ಕಡೆ ನಡೆಸುವ ಮೂಲಕ ಕಿರಣ್ ಸಾಧನೆ ಮಾಡಿದ್ದಾರೆ. ಕೋಳಿಯಿಂದ ಲಭಿಸುವ ಮಾಂಸ, ಮೊಟ್ಟೆ ಮಾತ್ರವಲ್ಲದೆ ಮಾಂಸದ ಪಚಡಿ, ಉಪ್ಪಿನಕಾಯಿ ಮಾಡುವ ಮೂಲಕ ದೊಡ್ಡ ಮೊತ್ತದ ಆದಾಯವನ್ನು ಗಳಿಸುತ್ತಿದ್ದಾರೆ. ನಾಟಿ ಕೋಳಿಯ ಮಾಂಸದ ಉಪ್ಪಿನಕಾಯಿ ದೇಶದಲ್ಲಿ ಕಡಿಮೆ ಪ್ರಮಾಣದಲ್ಲಿ ಲಭಿಸುತ್ತಿದ್ದು, ಇಲ್ಲಿ ಆ ಕಾರ್ಯ ಆಗುತ್ತಿರುವುದರಿಂದ ದೊಡ್ಡಸಂಖ್ಯೆಯಲ್ಲಿ ಗ್ರಾಹಕ ವಲಯವನ್ನು ಸೆಳೆದಿದ್ದೇವೆ ಎಂದರು.