ಬೆಂಗಳೂರು: ಯಾವುದೇ ಒಬ್ಬ ಕ್ರೀಡಾಪಟು ಅಭ್ಯಾಸ ಮಾಡದೇ ಉತ್ತಮ ಪ್ರದರ್ಶನ ನೀಡುವುದು ಅಸಾಧ್ಯ. ಈ ಲಾಕ್ಡೌನ್ ಸಮಯದಲ್ಲಿ ರಾಜ್ಯದ ಕ್ರೀಡಾಪಟುಗಳಿಗೆ ಅಭ್ಯಾಸವಿಲ್ಲದೇ ಸಮಸ್ಯೆ ಆಗಿದೆ ಎಂದು ಕ್ರೀಡಾ ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ಅಲ್ಲದೇ ಕ್ರೀಡಾ ಪಟುಗಳ ಸಮಸ್ಯೆ ಗಮನಿಸಿ ಸರ್ಕಾರ ಸ್ವಿಮ್ಮಿಂಗ್, ಕುಸ್ತಿ, ಕಬ್ಬಡಿ, ಕರಾಟೆ, ಹೆಲ್ತ್ ಕ್ಲಬ್ ಹೊರತು ಪಡಿಸಿ ಎಲ್ಲ ಕ್ರೀಡಾ ಚಟುವಟಿಕೆಗೆ ಅವಕಾಶ ನೀಡಿದೆ. ಇನ್ನು ಕೆಲವು ಕ್ರಿಡೆಗಳಿಗೆ ಕೇಂದ್ರ ಸರ್ಕಾರದ ಅನುಮತಿ ಪಡೆದು, ತರಬೇತಿಗೆ ಅವಕಾಶ ನೀಡಬೇಕಾಗುತ್ತದೆ. ವೃತ್ತಿಪರ ಕ್ರೀಡಾಪಟುಗಳಿಗೆ ತರಬೇತಿಗೆ ಅವಕಾಶ ಮಾಡಿಕೊಡಬೇಕಿರುವುದು ಅನಿವಾರ್ಯವಾಗಿದೆ.
ಇದರ ಬಗ್ಗೆ ನಾವು ಯೋಚನೆ ಮಾಡ್ವೀವಿ. ಅಲ್ಲದೇ ಸದ್ಯದ ಪರಿಸ್ಥಿತಿಯಲ್ಲಿ ಕ್ರೀಡಾ ಕೂಟಗಳ ಅಯೋಜನೆ ಮಾಡಲು ಸಾಧ್ಯವಿಲ್ಲ. ಕೊರೊನಾ ನಿಯಂತ್ರಣಕ್ಕೆ ಬಂದ್ರೆ ನಾವು ಯಥಾಸ್ಥಿತಿಗೆ ಬರಬಹುದು. ಇಲ್ಲದಿದ್ದರೆ, ಜನರು ಸೇರದಂತೆ ಕ್ರೀಡಾಕೂಟಗಳ ಆಯೋಜನೆ ಮಾಡಲು ಯೋಚಿಸಬೇಕಾಗುತ್ತದೆ.
ಇದಲ್ಲದೇ ಕೆಲವು ಕ್ರೀಡಾಪಟುಗಳ ಫಿಟ್ನೆಸ್ ಹಿತದೃಷ್ಟಿಯಿಂದ ಕೇಂದ್ರ ಕ್ರೀಡಾ ಮಂತ್ರಿಗಳ ಗಮನಕ್ಕೆ ತಂದು ಜಿಮ್ ಒಪನ್ ಮಾಡಲು ಅನುಮತಿ ನೀಡುವ ಬಗ್ಗೆ ತಿರ್ಮಾನ ತೆಗೆದುಕೊಳ್ಳುತ್ತೇವೆ. ಜೂನ್ 1 ಕ್ಕೆ ಜಿಮ್ಗಳು ಆರಂಭವಾಗುವ ಬಗ್ಗೆ ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಸಿ.ಟಿ. ರವಿ ಈಟಿವಿ ಭಾರತ್ಗೆ ಸುಳಿವು ನೀಡಿದ್ರು.