ಬೆಂಗಳೂರು: ನಗರದಲ್ಲಿ ನ್ಯೂ ಇಯರ್ ಸೆಲೆಬ್ರೆಷನ್ ಎಂಜಾಯ್ ಮಾಡುತ್ತಿದ್ದ ಕುಟುಂಬಕ್ಕೆ ಕಳ್ಳರು ಶಾಕ್ ನೀಡಿದ್ದಾರೆ. ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿ ದರೋಡೆ ಮಾಡಿರುವ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. ರಾಜಧಾನಿಯ ಮಹಾಲಕ್ಷ್ಮಿ ಲೇಔಟ್ನಲ್ಲಿ ನಿನ್ನೆ (ಶುಕ್ರವಾರ) ಸಂಜೆ ಈ ಘಟನೆ ನಡೆದಿದೆ.
ಡಿ.31ರಂದು ವೆಂಕಟೇಶ್ ಎನ್ನುವವರ ಮನೆಗೆ ಮೂವರು ಖದೀಮರು ಎಂಟ್ರಿ ಕೊಟ್ಟಿದ್ದಾರೆ. ಇಬ್ಬರು ಪೊಲೀಸರೆಂದೂ ಹಾಗೂ ಒಬ್ಬ ಕಳ್ಳನನ್ನು ಎಳೆದು ತಂದಿರುವುದಾಗಿ ವ್ಯಕ್ತಿಗಳು ಹೇಳಿದ್ದಾರೆ. ಕಳ್ಳತನದ ವಸ್ತು ನಿಮಗೆ ಕೊಟ್ಟಿದ್ದಾನೆಂದು ಮನೆಯವರಿಗೆ ಹೆದರಿಸಿ ಚಿನ್ನಾಭರಣ ಹಾಗೂ ನಗದು ತೆಗೆದುಕೊಂಡು ಮೂವರು ಪರಾರಿಯಾಗಿದ್ದಾರೆ ಎಂದು ದೂರು ದಾಖಲಾಗಿರುವ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಿಪಟೂರು ಪೊಲೀಸರು ಎಂದೂ ಮತ್ತು ವೆಂಕಟೇಶ್ ಮನೆಯಲ್ಲಿ ಹಣ, ಆಭರಣ ವಶಕ್ಕೆ ಪಡೆಯುತ್ತಿದ್ದೇವೆ ಎಂಬುದಾಗಿ ಹೇಳಿಕೊಂಡಿದ್ದಾರೆ. 600 ಗ್ರಾಂ ಚಿನ್ನಾಭರಣವನ್ನು ಮತ್ತು ಲಕ್ಷಾಂತರ ರೂ. ನಗದನ್ನು ದೋಚಿಕೊಂಡು ಹೋಗಿದ್ದಾರೆ ಎಂದು ದೂರು ನೀಡಲಾಗಿದೆ.
ಮೂವರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಸಿಬ್ಬಂದಿ, ಪರಿಶೀಲನೆ ನಡೆಸುತ್ತಿದ್ದಾರೆ.