ಬೆಂಗಳೂರು: ಬ್ಯಾಂಕ್ನಿಂದ ಡ್ರಾ ಮಾಡಿಕೊಂಡು ಹೋಗುತ್ತಿದ್ದ ವ್ಯಕ್ತಿಯ ಹಣವನ್ನು ದೋಚಿದ್ದ ಖದೀಮರು ಸಿಕ್ಕಿಬಿದ್ದಿದ್ದಾರೆ. ಸಾರ್ವಜನಿಕರ ಸಹಾಯದಿಂದ ಖದೀಮರನ್ನು ಹಿಡಿದ ವ್ಯಕ್ತಿ ಬಳಿಕ ಅವರನ್ನು ರಾಜಗೋಪಾಲ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಲಕ್ಷ್ಮಣ್ ಎಂಬುವರು ಪೀಣ್ಯದ ಬ್ಯಾಂಕ್ ಆಫ್ ಇಂಡಿಯಾದಿಂದ 3 ಲಕ್ಷ ರೂ.ಹಣ ಡ್ರಾ ಮಾಡಿಕೊಂಡು ಬ್ಯಾಂಕ್ನಿಂದ ಹೊರ ಬಂದಿದ್ದರು. ಹಣವನ್ನು ಬೈಕ್ ಡಿಕ್ಕಿಯಲ್ಲಿಟ್ಟುಕೊಂಡು ಮನೆಗೆ ತೆರಳುತ್ತಿದ್ದರು. ಇದನ್ನು ಗಮನಿಸಿದ ಆರೋಪಿಗಳು ಪೀಣ್ಯದಿಂದ ರಾಜಗೋಪಾಲ ನಗರದವರೆಗೆ ಬೈಕ್ನಲ್ಲಿ ಹಿಂಬಾಲಿಸಿಕೊಂಡು ಹೋಗಿದ್ದರು. ಮನೆ ಹತ್ತಿರ ಬಂದಾಗ ಲಕ್ಷ್ಮಣ್ ಬೈಕ್ನಿಂದ ಇಳಿದು ಮನೆಗೆ ಹೋಗಿದ್ದರು. ಇದೇ ಸಮಯಕ್ಕಾಗಿ ಹೊಂಚು ಹಾಕಿದ್ದ ಸಮಯ ಸಾಧಕರು ಬೈಕ್ನ ಡಿಕ್ಕಿಯಲ್ಲಿಟ್ಟಿದ್ದ ಹಣ ಕದ್ದು ಪರಾರಿಯಾಗಲು ಯತ್ನಿಸಿದ್ದರು. ಅಷ್ಟೊತ್ತಿಗಾಗಲೇ ಬೈಕ್ ಮಾಲೀಕ ಚೇಸ್ ಮಾಡಿ ಓರ್ವನನ್ನು ಹಿಡಿದಿದ್ದರು. ಅಲ್ಲದೇ ಸ್ಥಳೀಯರ ಸಹಕಾರದಿಂದ ಇನ್ನಿಬ್ಬರನ್ನು ಹಿಡಿದು ರಾಜಗೋಪಾಲ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.