ಬೆಂಗಳೂರು : ಸದ್ಯಕ್ಕೆ ಬಿಬಿಎಂಪಿ ಚುನಾವಣೆ ನಡೆಸುವ ಪ್ರಶ್ನೆಯೇ ಇಲ್ಲ. ವಾರ್ಡ್ ಪುನರ್ ವಿಂಗಡಣೆ ಪೂರ್ಣಗೊಳಿಸಿದ ಬಳಿಕ 223 ವಾರ್ಡ್ಗಳಿಗೆ ಚುನಾವಣೆ ನಡೆಸಲಾಗುತ್ತದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಸ್ಪಷ್ಟನೆ ನೀಡಿದ್ದಾರೆ.
ರಾಜ್ಯ ಉಸ್ತುವಾರಿಯಾಗಿ ನೇಮಕೊಳಗೊಂಡ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಲು ಬಿಜೆಪಿ ಕಚೇರಿಗೆ ಆಗಮಿಸಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂಬರುವ ವಿಧಾನಸಭಾ ಅಧಿವೇಶನದಲ್ಲೇ ಬೆಂಗಳೂರಿಗೆ ಪ್ರತ್ಯೇಕ ಕಾಯ್ದೆ ಮಂಡಿಸಲಾಗುತ್ತಿದೆ.
ಕಾಯ್ದೆ ಜಾರಿಗೆ ಬಂದ ನಂತರ ವಾರ್ಡ್ ಪುನರ್ ವಿಂಗಡಣೆ ಪೂರ್ಣಗೊಳಿಸಿ ಬಳಿಕ ಚುನಾವಣೆ ನಡೆಸಬೇಕಾಗುತ್ತದೆ ಎಂದು ಕಾನೂನು ತಜ್ಞರೂ ಸ್ಪಷ್ಟಪಡಿಸಿದ್ದಾರೆ. ಕೋರ್ಟ್ಗೂ ಈ ಕುರಿತು ಮನವರಿಕೆ ಮಾಡುತ್ತೇವೆ ಎಂದರು.
ಇಡೀ ದೇಶದಲ್ಲಿ ಇನ್ನು ಕಾಂಗ್ರೆಸ್ ಇರೋದಿಲ್ಲ. ರಾಜ್ಯ ಹಾಗೂ ದೇಶದಲ್ಲಿ ಇನ್ಮುಂದೆ ಬಿಜೆಪಿ ಆಳ್ವಿಕೆ ಇರುತ್ತದೆ. 20 ವರ್ಷಗಳ ಕಾಲ ಬಿಜೆಪಿಯೇ ಅಧಿಕಾರದಲ್ಲಿರಲಿದೆ. ದೇಶದಲ್ಲಿ ಇನ್ನೂ ಬಾಕಿ ಉಳಿದ ಕಾಂಗ್ರೆಸ್ ಗಿಡಗಳನ್ನು ಕಿತ್ತು ಬಿಜೆಪಿ ಗಿಡಗಳನ್ನು ನೆಡುತ್ತೇವೆ ಎಂದರು.
ಒಂಟಿಯಾದ ಕಾಂಗ್ರೆಸ್ : ನಾಳೆಯಿಂದ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಈಗಾಗಲೇ ಕಾಂಗ್ರೆಸ್ ನಂಬಬೇಡಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಈ ಮೂಲಕ ಇಬ್ಬರು ಕೂಡ ಜಗಳವಾಡಿದ್ದಾರೆ. ಕಾಂಗ್ರೆಸ್ ಈಗ ಒಂಟಿಯಾಗಿದ್ದು, ಕಾಂಗ್ರೆಸ್ನ್ನು ಎದುರಿಸಲು ನಾವು ಸಜ್ಜಾಗುವ ಅವಶ್ಯಕತೆ ಇಲ್ಲ ಎಂದರು.
ಸಚಿವ ಸಂಪುಟ ಬಗ್ಗೆ ಚರ್ಚೆ ಇಲ್ಲ : ಇಂದು ಅರುಣ್ ಸಿಂಗ್ ಅವರನ್ನು ಭೇಟಿಯಾಗಿ ಕೇವಲ ಇತ್ತೀಚಿನ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಲಾಗಿದೆ. ಸಚಿವ ಸಂಪುಟ ವಿಚಾರವಾಗಿ ಯಾವುದೆ ಚರ್ಚೆ ನಡೆಸಿಲ್ಲ. ಸಂಪುಟ ರಚನೆ ಬಗ್ಗೆ ಮುಖ್ಯಮಂತ್ರಿಗಳಿಗೆ ಅಧಿಕಾರ ಇದೆ. ಅವರು ಆಕಾಂಕ್ಷಿಗಳ ಪಟ್ಟಿಯನ್ನು ಹೈಕಮಾಂಡ್ಗೆ ಕಳುಹಿಸಿ ಕೊಟ್ಟಿದ್ದಾರೆ. ಹೈಕಮಾಂಡ್ನಿಂದ ಒಪ್ಪಿಗೆ ಸಿಕ್ಕ ಬಳಿಕ ಸಿಎಂ ಆ ಬಗ್ಗೆ ಘೋಷಣೆ ಮಾಡುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: ಸಂಪುಟ ವಿಸ್ತರಣೆ ವಿಚಾರ: ಸಚಿವ ಆರ್ ಅಶೋಕ್ ಏನಂತಾರೆ?
ಕೊಟ್ಟ ಮಾತಿಗೆ ತಪ್ಪದ ಪಕ್ಷ : ಬಿಜೆಪಿ ಕೊಟ್ಟ ಮಾತಿಗೆ ತಪ್ಪದ ಪಾರ್ಟಿ. ಹಿಂದೆ ಮಾತು ಕೊಟ್ಟಂತೆ ಕುಮಾರಸ್ವಾಮಿಯವರಿಗೆ 20 ತಿಂಗಳು ಅಧಿಕಾರ ಕೊಟ್ಟಿದ್ದು.ಅದರಂತೆ 20 ದಿನಗಳಿಗೆ ಒಂದು ದಿನವೂ ಕಡಿಮೆ ಇಲ್ಲದಂತೆ ಅವರಿಗೆ ಅಧಿಕಾರ ಕೊಟ್ಟಿದ್ದೆವು. ಈ ಮೂಲಕ ಕೊಟ್ಟ ಮಾತನ್ನು ನಾವು ಉಳಿಸಿಕೊಂಡಿದ್ದೇವೆ. ಆದರೆ ಕಾಂಗ್ರೆಸ್ನವರು ಅವರಿಗೆ 5 ವರ್ಷ ನೀವೇ ಸಿಎಂ ಎಂದು ಕೊನೆಗೆ 1 ವರ್ಷಕ್ಕೆ ಕೆಳಗೆ ಇಳಿಸಿದರು ಎಂದು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು.
ಕಾಂಗ್ರೆಸ್ ವಿಷ ಕಕ್ಕುವ ಪಾರ್ಟಿ : ಕಾಂಗ್ರೆಸ್ ಒಂದು ವಿಷ ಕಕ್ಕುವ ಪಕ್ಷ. ಹೀಗಾಗಿ ಅದನ್ನು ನಂಬಿದರೆ ಗೋವಿಂದ, ಗೋವಿಂದ ಎಂದು ಹಾಸ್ಯ ಚಟಾಕಿ ಹಾರಿಸಿದರು.