ಬೆಂಗಳೂರು: ಇಂದಿರಾ ಕ್ಯಾಂಟಿನ್ಗಳ ಬಿಲ್‌ಗಳನ್ನು ಕಾನೂನಾತ್ಮಕವಾಗಿ ಪಾವತಿ ಮಾಡಲಾಗಿದೆ. ಯಾವುದೇ ರೀತಿಯ ಬಿಲ್‌ಗಳನ್ನು ಬಾಕಿ ಉಳಿಸಿಕೊಂಡಿಲ್ಲ. ಕೆಲವು ಸಣ್ಣಪುಟ್ಟ ಬಿಲ್‌ಗಳು ಮಾತ್ರ ಬಾಕಿ ಇದ್ದು, ಬಹುತೇಕ ಕ್ಲಿಯರ್ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸ್ಪಷ್ಟಪಡಿಸಿದರು.
ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಹಾಗೂ ಟಿಕೆಟ್ ವಂಚನೆ ಆರೋಪದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿರುವ ಚೈತ್ರ ಕುಂದಾಪುರ ಅವರ ಆರೋಪಕ್ಕೆ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಪ್ರತಿಕ್ರಿಯಿಸಿರುವ ತುಷಾರ್ ಗಿರಿನಾಥ್, 2019ರ ರಾಜ್ಯ ಲೆಕ್ಕ ಪರಿಶೋಧನಾ ಆಡಿಟ್ ವರದಿಯಲ್ಲಿ ಇಂದಿರಾ ಕ್ಯಾಂಟಿನ್ ಬಗ್ಗೆ ಉಲ್ಲೇಖ ಮಾಡಲಾಗಿದೆ. 2019-20ರ ಲೆಕ್ಕ ಪರಿಶೋಧನೆ ವರದಿಯಲ್ಲಿ 14.92 ಕೋಟಿ ಅವ್ಯವಹಾರ ಆಗಿರುವ ಬಗ್ಗೆ ತಿಳಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಪೂರಕ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದರು.
ಲೆಕ್ಕ ಪರಿಶೋಧನಾ ವರದಿಯಲ್ಲಿ ಊಟ-ತಿಂಡಿಯ ಬಗ್ಗೆ ನಕಲಿ ಲೆಕ್ಕ ಕೊಟ್ಟಿರುವುದು ದೃಢವಾಗಿದೆ. ಪ್ರಸ್ತುತ ಇಂದಿರಾ
ಕ್ಯಾಂಟಿನ್ ಬಿಲ್‌ಗಳನ್ನು ಬಹುತೇಕ ಕ್ಲಿಯರ್ ಮಾಡಲಾಗಿದೆ. ಕೆಲವು ಸಣ್ಣಪುಟ್ಟ ಬಿಲ್‌ಗಳು ಬಾಕಿ ಇರಬೇಕು. ಅದನ್ನು ಆರೋಗ್ಯ ವಿಭಾಗದ ಆಯುಕ್ತರಿಗೆ ನೋಡಿಕೊಳ್ಳಲು ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಿಸಿಬಿ ಅಧಿಕಾರಿಗಳು ಮಾಹಿತಿ ಕೇಳಿಲ್ಲ: ಕ್ಯಾಂಟಿನ್ಗಳ ಬಗ್ಗೆ ಸಿಸಿಬಿ ಅಧಿಕಾರಿಗಳು ಮಾಹಿತಿ ಕೇಳಿಲ್ಲ. ಒಂದು ವೇಳೆ ಕೇಳಿದರೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ. ಸದ್ಯ ಯಾವುದೇ ಬಿಲ್ ಬಾಕಿ ಇಲ್ಲ ಎಂದು ಸ್ಪಷ್ಟೀಕರಣ ನೀಡಿದರು.
ಇದನ್ನೂ ಓದಿ: 188 ಹೊಸ ಇಂದಿರಾ ಕ್ಯಾಂಟೀನ್ ಸ್ಥಾಪಿಸಲು ಸಂಪುಟ ತೀರ್ಮಾನ: ಆಯಾ ಭಾಗದ ಸ್ಥಳೀಯ ಆಹಾರಕ್ಕೆ ಆದ್ಯತೆ