ಬೆಂಗಳೂರು: ಕೊರೊನಾ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆ, ರಾಜ್ಯದಲ್ಲಿ ಕರ್ಫ್ಯೂ ಅಥವಾ ನೈಟ್ ಕರ್ಫ್ಯೂ ಜಾರಿಗೊಳಿಸುವ ಸಂಬಂಧ ಸದ್ಯ ಯಾವುದೇ ಚರ್ಚೆ ನಡೆದಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಆರ್.ಟಿ. ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ನಿಯಂತ್ರಣಕ್ಕೆ ಕಟ್ಟಿನಿಟ್ಟಿನ ನಿಯಮ ಜಾರಿ ಮಾಡುವ ಕುರಿತು ಸದ್ಯ ಯಾವುದೇ ಸಭೆ ನಡೆದಿಲ್ಲ. ನಾಳೆ ಸಿಎಂ ಸಭೆ ಕರೆದಿದ್ದಾರೆ. ಸಭೆಯಲ್ಲಿ ಸಿಎಂ ಯಡಿಯೂರಪ್ಪನವರು ಎಲ್ಲರ ಅಭಿಪ್ರಾಯ ಪಡೆದು ಏನು ಹೇಳುತ್ತಾರೋ, ಅದರ ಆಧಾರದ ಮೇಲೆ ಕ್ರಮ ಜರುಗಿಸುತ್ತೇವೆ. ಸದ್ಯಕ್ಕೆ ಕರ್ಫ್ಯೂ ಆಗಲಿ ಅಥವಾ ನೈಟ್ ಕರ್ಫ್ಯೂ ಆಗಲಿ, ಯಾವ ವಿಷಯದ ಬಗ್ಗೆಯೂ ನಮ್ಮ ಜೊತೆ ಚರ್ಚೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಸಿಡಿ ಕುರಿತು ಸಿದ್ದರಾಮಯ್ಯನವರು ಅಧಿವೇಶನದಲ್ಲಿ ಮಾತನಾಡಲಿ, ಅದಕ್ಕೆ ಸರ್ಕಾರ ಉತ್ತರ ನೀಡಲಿದೆ. ಸರ್ಕಾರದ ಷಡ್ಯಂತ್ರಕ್ಕೆ ಹೆದರುವ ಮಗನಲ್ಲ ಎಂಬ ಡಿಕೆಶಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಅದು ಅವರ ಹೇಳಿಕೆ, ಆ ಬಗ್ಗೆ ಅವರೇ ಸ್ಪಷ್ಟನೆ ಕೊಡಬೇಕು ಅದು ನಮಗೆ ಸಂಬಂಧಿಸಿದ್ದಲ್ಲ ಎಂದರು.
ಇದನ್ನೂ ಓದಿ: ಬೇರೆ ರಾಜ್ಯದಿಂದ ಬಂದವ್ರಿಂದ ಹೊಸಪೇಟೆಯಲ್ಲಿ ಕೊರೊನಾ ಹೆಚ್ಚಳ: ಸಚಿವ ಆನಂದ್ ಸಿಂಗ್
ಸಿಡಿ ಪ್ರಕರಣ ಸಂಬಂಧ ಭದ್ರತೆ ಕೋರಿರುವ ಯುವತಿ ಎಲ್ಲಿದ್ದಾಳೆ ಎಂಬುದನ್ನು ಮತ್ತು ಉಳಿದ ವಿಚಾರವನ್ನು ಎಸ್ಐಟಿಯವರೇ ನೋಡಿಕೊಳ್ಳುತ್ತಾರೆ. ಯುವತಿ ಹಾಗೂ ಅವರ ಕುಟುಂಬಕ್ಕೆ ಭದ್ರತೆ ಕೊಡಿ ಎಂದಷ್ಟೇ ಹೇಳಿದ್ದೇನೆ. ಸಿಡಿ ತನಿಖೆ ಕುರಿತು ಪೊಲೀಸ್ ಅಧಿಕಾರಿಗಳ ಜೊತೆಗೆ ಇಂದು ಯಾವ ಸಭೆಯೂ ಇಲ್ಲ ಎಂದರು.