ಬೆಂಗಳೂರು: ಕೊರೊನಾ ನಿಯಂತ್ರಣ ಒಂದು ಹಂತಕ್ಕೆ ಬರುತ್ತಿತ್ತು. ಈ ಸಂದರ್ಭದಲ್ಲಿ ಬ್ರಿಟನ್ ರೂಪಾಂತರಿ ಆತಂಕ ಹುಟ್ಟಿಸಿದೆ. ಹೊಸ ವರ್ಷಕ್ಕೆ ಹೆಚ್ಚು ಜನ ಸೇರುತ್ತಾರೆ. ಇದಕ್ಕಾಗಿ ಕೆಲವು ನಿರ್ಬಂಧ ಹೇರುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಆರ್.ಟಿ.ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಕಂದಾಯ ಸಚಿವರ ಜೊತೆ ಈ ಸಂಬಂಧ ಒಂದು ಸುತ್ತಿನ ಮಾತುಕತೆ ನಡೆದಿದೆ. ಬಿಬಿಎಂಪಿ ಮತ್ತು ನಗರ ಪೊಲೀಸ್ ಆಯುಕ್ತರು ಚರ್ಚಿಸಿ ಮಾರ್ಗಸೂಚಿ ಸಿದ್ಧಪಡಿಸ್ತಾರೆ. ಹೊರ ದೇಶಗಳಿಂದ ಬರುವವರ ಮೇಲೆ ನಿಗಾ ಇಡಲಾಗುತ್ತದೆ. ವಿಮಾನ ನಿಲ್ದಾಣಗಳಲ್ಲಿ ವಿಶೇಷ ನಿಗಾ ಇರಿಸಲಾಗತ್ತದೆ. ಯುರೋಪ್ ದೇಶಗಳಿಂದ ಬಂದವರಿಗೆ ಪರೀಕ್ಷೆ ನಡೆಸಲಾಗುತ್ತದೆ. ಈಗಾಗಲೇ ಬಂದವರ ಟ್ರೇಸ್ ಮಾಡಲು ಪೊಲೀಸರಿಗೆ ಸೂಚಿಸಲಾಗಿದೆ. ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣಗಳಲ್ಲಿ ಬಿಗಿ ನಿಗಾ ವಹಿಸಲಾಗುತ್ತದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ವಿಷ್ಣು ಪ್ರತಿಮೆ ಹಾನಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಸಂಬಂಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ನಗರ ಪೊಲೀಸ್ ಆಯುಕ್ತರು ಇದರ ಬಗ್ಗೆ ಈಗಾಗಲೇ ಮಾತಾಡಿದ್ದಾರೆ. ಸೂಕ್ತ ಕ್ರಮಕ್ಕೆ ಆಯುಕ್ತರಿಗೆ ಸೂಚಿಸಲಾಗಿದೆ ಎಂದರು.
ವಿಷ್ಣು ಪ್ರತಿಮೆ ಧ್ವಂಸ ಮಾಡಿರುವುದು ದೊಡ್ಡ ತಪ್ಪು:
ವಿಷ್ಣು ಪ್ರತಿಮೆ ಧ್ವಂಸ ವಿಚಾರವಾಗಿ ಪ್ರತಿಕ್ರಿಯಿಸಿದ ಶಾಸಕ ಮುನಿರತ್ನ, ಡಾ. ರಾಜ್ ಹಾಗೂ ವಿಷ್ಣುವರ್ಧನ್ ಕನ್ನಡ ಚಿತ್ರರಂಗದ ಎರಡು ಕಣ್ಣುಗಳು. ಯಾರಿಗೆ ಅಪಮಾನ ಮಾಡಿದ್ರು ಅದು ಅಪಮಾನವೇ. ವಿಷ್ಣುವರ್ಧನ್ ಪ್ರತಿಮೆ ಧ್ವಂಸ ಮಾಡಿರೋದು ಬಹಳ ದೊಡ್ಡ ತಪ್ಪು ಎಂದರು.
ಈ ಕೃತ್ಯ ಎಸಗಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಈ ಘಟನೆಯನ್ನು ನಾನು ಖಂಡಿಸುತ್ತೇನೆ. ವಿಷ್ಣು ಪ್ರತಿಮೆ ಧ್ವಂಸವಾಗಿರೋದು ಬಹಳ ದುಃಖವಾಗುತ್ತದೆ. ಕೂಡಲೇ ತಪ್ಪಿತಸ್ಥರನ್ನ ಬಂಧಿಸಿ ಕ್ರಮ ಕೈಗೊಳ್ಳಬೇಕು. ಕನ್ನಡ ಚಿತ್ರರಂಗ ಹಾಗೂ ನಾನೊಬ್ಬ ನಿರ್ಮಾಪಕನಾಗಿ ಈ ಕೃತ್ಯವನ್ನು ಖಂಡಿಸುತ್ತೇನೆ ಎಂದರು.