ಬೆಂಗಳೂರು : ಇತ್ತೀಚೆಗೆ ಜಾಗತಿಕವಾಗಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಹಾಗೂ ಗುರುತಿಸಲಾಗಿರುವ ಒಮಿಕ್ರಾನ್ ತಳಿಯನ್ನು Variant of concern ಎಂದು ವರ್ಗೀಕರಿಸಲಾಗಿದೆ.
ಇನ್ನು National Technical Advisory Group of Immunization (NTAGI)ನ ಶಿಫಾರಸ್ಸಿನಂತೆ ಕೋವಿಡ್-19 ಲಸಿಕೆಯನ್ನ ವೈಜ್ಞಾನಿಕ ಆದ್ಯತೆ ಮತ್ತು ವ್ಯಾಪ್ತಿಯನ್ನು ಪರಿಷ್ಕರಿಸಲಾಗಿದೆ.
ಈ ನಿಟ್ಟಿನಲ್ಲಿ ಇದೇ ಜನವರಿ 3ನೇ ತಾರೀಖಿನಿಂದ 15 ರಿಂದ 18 ವರ್ಷದ ಮಕ್ಕಳಿಗೆ ಹಾಗೂ ಜನವರಿ 10ನೇ ತಾರೀಖಿನಿಂದ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು, ಅಸ್ವಸ್ಥತೆ ಹೊಂದಿರುವ 60 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ ಮುನ್ನಚ್ಚರಿಕಾ ಡೋಸ್ (Precaution Dose) ಲಸಿಕೆ ನೀಡುವ ಕುರಿತಂತೆ ಮುನ್ನೆಚ್ಚರಿಕೆ ವಹಿಸುವಂತೆ ರಾಷ್ಟ್ರೀಯ ಆರೋಗ್ಯ ಅಭಿಯಾನ ಆದೇಶ ಹೊರಡಿಸಿದೆ.
ಅದರಂತೆ, 15 ರಿಂದ 18 ವರ್ಷದ ಮಕ್ಕಳಿಗೆ ಕೋವಿಡ್-19 ಲಸಿಕೆಯನ್ನು ಜನವರಿ 3ರಿಂದ ಪ್ರಾರಂಭಿಸಲಾಗುತ್ತಿದೆ. ಕೇವಲ ಕೋವ್ಯಾಕ್ಸಿನ್ ಲಸಿಕೆ ಮಾತ್ರ ಪಡೆಯಲು ಅವಕಾಶವಿರಲಿದೆ.
ಇನ್ನು ಹೆಚ್ಚಿನ ಮುನ್ನೆಚ್ಚರಿಕೆಗಾಗಿ ಜನವರಿ 10ರಿಂದ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು 2ನೇ ಡೋಸ್ ಲಸಿಕೆ ಪಡೆದು 39 ವಾರಗಳನ್ನು (9 ತಿಂಗಳು) ಪೂರೈಸಿದ ನಂತರ ಮತ್ತೊಂದು ಡೋಸ್ ಲಸಿಕೆ ಪಡೆಯಬಹುದು.
60 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿಯು ಸಹ ಅಸ್ವಸ್ಥತೆ ಹೊಂದಿದ್ದರೆ ಅವರು ವೈದ್ಯರ ಸಲಹೆಯ ಮೇರೆಗೆ 2ನೇ ಡೋಸ್ ಪಡೆಯಲು ಅರ್ಹರಾಗಿರುತ್ತಾರೆ. ಈ ಹೆಚ್ಚುವರಿ ಲಸಿಕಾ ಡೋಸ್ ಪಡೆಯಲು ವೈದ್ಯರಿಂದ ಯಾವುದೇ ಪ್ರಮಾಣ ಪತ್ರ ಬೇಕಾಗಿರುವುದಿಲ್ಲ. ಇನ್ನು ಈ ಲಸಿಕೆಯನ್ನು ಕೇಂದ್ರಗಳಲ್ಲಿ ಉಚಿತವಾಗಿ ಪಡೆಯಬಹುದಾಗಿದೆ.
ನಿಬಂಧನೆಗಳೇನು?: 2007ನೇ ಇಸವಿಯಲ್ಲಿ ಜನಿಸಿರುವ ಮತ್ತು ಅದಕ್ಕೂ ಮುನ್ನ ಜನಿಸಿರುವ ಮಕ್ಕಳು ಕೋವ್ಯಾಕ್ಸಿನ್ ಲಸಿಕೆ ಪಡೆಯಲು ಅರ್ಹರು. ಈ ಮಕ್ಕಳಿಗೆ ಈಗಾಗಲೇ ಚಾಲ್ತಿಯಲ್ಲಿರುವಂತೆ ಕೋವ್ಯಾಕ್ಸಿನ್ ಲಸಿಕೆಯ 0.5 ಎಂಎಲ್ ಇಂಟ್ರಮಸ್ಕುಲರ್ 2 ಡೋಸ್ ಚುಚ್ಚುಮದ್ದನ್ನು 28 ದಿನಗಳ ಅಂತರದಲ್ಲಿ ನೀಡಲಾಗುತ್ತೆ.
ಲಸಿಕಾಕರಣಕ್ಕೆ ಮುನ್ನ ಮಕ್ಕಳ ಪೋಷಕರಿಗೆ ವಿಶೇಷ ಜಾಗೃತಿ ಸಭೆಗಳನ್ನು ಏರ್ಪಡಿಸಿ, ಲಸಿಕೆ ಮಹತ್ವ ಮತ್ತು ಅವಶ್ಯಕತೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡುವುದು ಮತ್ತು ಅವರ ಸಂದೇಹಗಳನ್ನು ನಿವಾರಿಸುವ ಕೆಲಸವನ್ನು ಇಲಾಖೆ ಮಾಡಬೇಕಿದೆ.
ಫಲಾನುಭವಿ ಮಕ್ಕಳು ಸ್ವಂತ ದೂರವಾಣಿ ಸಂಖ್ಯೆ ಬಳಸಿ ಅಥವಾ ಕೋವಿನ್ನಲ್ಲಿ ಈಗಾಗಲೇ ಇರುವ ತಂದೆ ತಾಯಿಗಳ/ಪೋಷಕರ ಅಕೌಂಟ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಇದು ಯಾವುದೂ ಲಭ್ಯವಿಲ್ಲದಿದ್ದಲ್ಲಿ, ಶಾಲೆಯ ಮುಖ್ಯೋಪಾಧ್ಯಾಯರ ದೂರವಾಣಿ ಸಂಖ್ಯೆ ಮೂಲಕ ನೋಂದಣಿ ಮಾಡಿಕೊಳ್ಳಬಹುದು.
ಲಸಿಕೆ ಪ್ರಕ್ರಿಯೆಗಾಗಿ ಶಾಲೆಯ ಗುರುತಿನ ಚೀಟಿ ಅಥವಾ ಆಧಾರ್ ಬಳಸಿ ಫೋಟೋ ಐಡಿಯನ್ನು ಕೋವಿಡ್ ಪೋರ್ಟಲ್‌ನಲ್ಲಿ ಕೇಂದ್ರೀಕರಿಸಬಹುದು. ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಮತ್ತು ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಬೋರ್ಡ್ ವತಿಯಿಂದ 15 ರಿಂದ 18 ವರ್ಷ ವಯಸ್ಸಿನ ಅರ್ಹ ಫಲಾನುಭವಿಗಳ ಶಾಲಾವಾರು ಪಟ್ಟಿಯನ್ನು ಪಡೆದು ಲಸಿಕಾ ಕಾರ್ಯಕ್ರಮ ಆಯೋಜಿಸುವುದು.
ಹಾಗೆಯೇ, ಅರ್ಹ ಫಲಾನುಭವಿ ಮಕ್ಕಳಿಗೆ/ಪೋಷಕರಿಗೆ ಮುಂಚಿತವಾಗಿಯೇ ದಿನಾಂಕದ ಮಾಹಿತಿ ತಿಳಿಸಬೇಕು. ಆಯಾ ಸರ್ಕಾರಿ ಶಾಲಾ/ಕಾಲೇಜುಗಳಲ್ಲಿಯೇ ಕೋವಿಡ್-19 ಲಸಿಕಾ ಕೇಂದ್ರಗಳನ್ನು ಆಯೋಜಿಸಿ ಆರೋಗ್ಯ ತಂಡಗಳು, ಆರ್‌ಬಿಎಸ್‌ಕೆ ತಂಡಗಳು ನಡೆಸುವಂತೆ ತಿಳಿಸಲಾಗಿದೆ. ಅಸ್ವಸ್ಥತೆ ಹೊಂದಿರುವ ಮಕ್ಕಳ ಲಸಿಕಾಕರಣಕ್ಕೆ ಪೋಷಕರ ಸಹಮತ ಪಡೆಯುವುದು ಮತ್ತು ಆರೋಗ್ಯ ಕೇಂದ್ರಗಳಲ್ಲಿಯೇ ವೈದ್ಯರ ಮೇಲ್ವಿಚಾರಣೆಯಲ್ಲಿ ಕೈಗೊಳ್ಳುವುದು.
ಯಾವುದೇ ಮಕ್ಕಳು ಟಿಡಿ ಅಥವಾ ಇನ್ನಾವುದೇ ಲಸಿಕೆ ಪಡೆದಿದ್ದರೆ ಅಂತಹ ಮಕ್ಕಳಿಗೆ 15 ದಿನಗಳ ನಂತರ ವ್ಯಾಕ್ಸಿನ್ ಲಸಿಕೆ ನೀಡಲಾಗುತ್ತೆ. ಈ ದಿನಗಳಂದು ಲಸಿಕೆ ಪಡೆಯದೆ ಬಿಟ್ಟು ಹೋದ ಮಕ್ಕಳನ್ನು ಹತ್ತಿರದ ಸರ್ಕಾರಿ ಲಸಿಕಾ ಕೇಂದ್ರಗಳಿಗೆ ಕಳುಹಿಸಿ ಲಸಿಕೆ ಪಡೆಯಲು ವ್ಯವಸ್ಥೆ ಮಾಡಬೇಕು.
15 ರಿಂದ 18 ವರ್ಷದೊಳಗಿನ ಮಕ್ಕಳ ಲಸಿಕಾಕರಣಕ್ಕಾಗಿ ಸಾಕಷ್ಟು ಸ್ಥಳಾವಕಾಶವಿರುವ ಅಂದರೆ 3 ಕೊಠಡಿಗಳುಳ್ಳ ಶಾಲೆಯನ್ನು ಗುರುತಿಸುವುದು. ಈ ಶಾಲೆಗಳಲ್ಲಿ ಲಸಿಕಾಕರಣಕ್ಕೆ ಅವಶ್ಯಕವಾದ ಲಾಜಿಸ್ಟಿಕ್ ಕೋವಿಡ್-19 ಐಇಸಿ ಪರಿಕರಗಳು, ಶುದ್ಧ ನೀರು ಮತ್ತು ಕೈ ತೊಳೆಯಲು ಸೌಲಭ್ಯಗಳ ಲಭ್ಯತೆ ನೋಡಿಕೊಳ್ಳುವುದು.
ಶಾಲಾ ಲಸಿಕಾ ಕೇಂದ್ರವಲ್ಲದೆ ಬೇರೆ ಯಾವುದೇ ಕೇಂದ್ರದಲ್ಲಿ 15 ರಿಂದ 18 ವರ್ಷದೊಳಗಿನ ಮಕ್ಕಳ ಮತ್ತು 18 ವರ್ಷ ಮೇಲ್ಪಟ್ಟವರ ಲಸಿಕಾಕರಣ ನಡೆಸುತ್ತಿದ್ದರೆ, ಎರಡು ಬೇರೆ ಬೇರೆ ಸರದಿಗಳನ್ನು ಆಯೋಜಿಸಲಾಗುತ್ತೆ.
ಇನ್ನು ಆಫ್‌ಲೈನ್ ತರಗತಿಗಳನ್ನು ನಡೆಸುವ ಶಾಲೆಗಳಲ್ಲಿ ಲಸಿಕಾಕರಣಕ್ಕಾಗಿ ದಿನಾಂಕ ನಿಗದಿಪಡಿಸಿ ಮಕ್ಕಳನ್ನು ಬರಹೇಳಿ ಲಸಿಕೆ ನಡೆಸುವಂತೆ ಇಲಾಖೆ ಸೂಚಿಸಿದೆ. ಶಾಲೆಯಿಂದ ಹೊರಗುಳಿದ ಅಥವಾ ಶಾಲೆ ಬಿಟ್ಟ ಮಕ್ಕಳ ಲಸಿಕಾಕರಣವನ್ನು ಹತ್ತಿರದ ಸರ್ಕಾರಿ ಲಸಿಕಾಕರಣ ಕೇಂದ್ರಗಳಲ್ಲಿ ನಡೆಸಬೇಕು.
ಕಾರ್ಮಿಕ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಇಂತಹ ಮಕ್ಕಳ ಲಸಿಕಾಕರಣಕ್ಕಾಗಿ ಆರೋಗ್ಯ ಇಲಾಖೆಯೊಂದಿಗೆ ಸಮನ್ವಯಿಸುವುದು ಮತ್ತು ಸಹಕರಿಸುವಂತೆ ಆದೇಶಿಸಲಾಗಿದೆ.
ಇನ್ನು ಎಲ್ಲಾ ಸರ್ಕಾರಿ ಕೋವಿಡ್-19 ಕೇಂದ್ರಗಳಲ್ಲಿ ಲಸಿಕೆಗಳನ್ನು ಉಚಿತವಾಗಿ ನೀಡಲಾಗುತ್ತೆ. ಯಾವುದೇ ಖಾಸಗಿ ಶಾಲೆಗಳು ಇಷ್ಟಪಟ್ಟು ಖಾಸಗಿ ಆಸ್ಪತ್ರೆಗಳೊಂದಿಗೆ ಸಮನ್ವಯಿಸಿ ನಿಗದಿಪಡಿಸಲಾದ ದರದಲ್ಲಿ ಕೋವ್ಯಾಕ್ಸಿನ್ ಲಸಿಕೆ ನೀಡಬಹುದು.
ಫ್ರಂಟ್‌ಲೈನ್ ವಾರಿಯರ್ಸ್ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ
ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು ಹಾಗೂ ಅಸ್ವಸ್ಥತೆ ಹೊಂದಿದ 60 ವರ್ಷ ಮೇಲ್ಪಟ್ಟ ನಾಗರಿಕರು ಈಗಾಗಲೇ ಅಸ್ತಿತ್ವದಲ್ಲಿರುವ ತಮ್ಮ ಕೋವಿನ್ ಅಕೌಂಟ್ ಮೂಲಕ ಲಸಿಕೆ ಪಡೆಯಬಹುದು. ಕೋವಿನ್ ಪೋರ್ಟಲ್‌ನಲ್ಲಿ ನಮೂದಿಸಿದಂತೆ 2ನೇ ಡೋಸ್ ಲಸಿಕ ಪಡೆದು 39 ವಾರಗಳ (9 ತಿಂಗಳು) ನಂತರ ಈ ಮುನ್ನೆಚ್ಚರಿಕೆ ಡೋಸ್ ಲಸಿಕೆ ಪಡೆಯಬಹುದಾಗಿದೆ.
ನೋಂದಣಿ ಮತ್ತು ಲಸಿಕಾಕರಣಕ್ಕೆ ವೇಳೆಯನ್ನು ನಿಗದಿಪಡಿಸಿಕೊಳ್ಳುವ ಸೇವೆಗಳನ್ನು ಆನ್‌ಲೈನ್ ಮತ್ತು ಆನ್‌ಸೈಟ್ (ವಾಕ್-ಇನ್") ವಿಧಾನಗಳ ಮೂಲಕ ಪಡೆದುಕೊಳ್ಳಬಹುದು. ಮುನ್ನೆಚ್ಚರಿಕೆ ಡೋಸ್ ಲಸಿಕೆ ಪಡೆದುಕೊಂಡ ವಿವರವನ್ನು ಕೋವಿನ್ ಪೋರ್ಟಲ್ ಮುಖಾಂತರ ಡಿಜಿಟಲ್ ಲಸಿಕಾ ಪ್ರಮಾಣ ಪತ್ರ ಪಡೆಯಬಹುದು.