ಯಲಹಂಕ/ಬೆಂಗಳೂರು: ವೀಸಾ ಅವಧಿ ಮುಗಿದರೂ ಕೂಡ ನಗರದಲ್ಲಿ ಅಕ್ರಮವಾಗಿ ನೆಲೆಸಿ ಕಾರು ಮತ್ತು ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ವಿದೇಶಿ ವಿದ್ಯಾರ್ಥಿಗಳನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.
ನೈಜೀರಿಯಾದ ಜಾನ್ ನ್ಯಾರೊ ಹಾಗೂ ಲಿಬಿಯಾ ದೇಶದ ಸಫಿ ಈಡನ್ ಗುಮಾ ತಾಹಿರ್ ಬೆನ್ ಬಂಧಿತರು. ಶಿಕ್ಷಣ ವೀಸಾದಡಿ ಭಾರತಕ್ಕೆ ಬಂದಿದ್ದ ಇವರು ತಮಿಳುನಾಡಿನ ಅಣ್ಣಾಮಲೈ ಯುನಿವರ್ಸಿಟಿಯಲ್ಲಿನ ತಮ್ಮ ದೂರ ಶಿಕ್ಷಣ ವ್ಯಾಸಂಗವನ್ನು ಮೊಟಕುಗೊಳಿಸಿದ್ದರು. ವೀಸಾ ಅವಧಿ ಮುಗಿದ ಬಳಿಕ ಅಕ್ರಮವಾಗಿ ನೆಲೆಸಿದ್ದ ಆರೋಪಿಗಳು ಡ್ರಗ್ ವ್ಯಸನಕ್ಕೆ ಬಿದ್ದು, ಕಾರು ಹಾಗೂ ಬೈಕ್ ಕಳ್ಳತನ ಶುರು ಮಾಡಿಕೊಂಡಿದ್ದರು.
ಫೆ.24ರಂದು ರಾತ್ರಿ ವೇಳೆ ಆರೋಪಿಗಳು ಯಲಹಂಕದ ಕಿಯಾ ಶೋ ರೂಂಗೆ ನುಗ್ಗಿದ್ದು, ಕುಡಿಯುವ ನೀರು ಕೇಳುವ ನೆಪದಲ್ಲಿ ಸೆಕ್ಯುರಿಟಿ ಗಾರ್ಡ್ನನ್ನು ಲಾಕ್ ಮಾಡಿಕೊಂಡಿದ್ದರು. ಬಳಿಕ ಮಚ್ಚು ತೋರಿಸಿ ಶೋ ರೂಂನೊಳಗಿದ್ದ ಎರಡು ಕಿಯಾ ಕಂಪೆನಿಯ ಸೆಲ್ಟಾಸ್ ಕಾರು ಕದ್ದು ಎಸ್ಕೇಪ್ ಆಗಿದ್ರು. ಕದ್ದ ಕಾರುಗಳನ್ನು ಆರೋಪಿಗಳು ಚೆನ್ನೈ, ಮುಂಬೈ ಹಾಗೂ ಪುಣೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಆರೋಪಿಗಳಿಂದ 65.2 ಲಕ್ಷ ಮೌಲ್ಯದ 2 ಕಿಯಾ ಕಂಪೆನಿ ಕಾರು, 1 ಫಾರ್ಚೂನರ್ ಕಾರ್ ಹಾಗೂ 3 ಬೈಕ್ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಈ ಹಿಂದೆ ಇದೇ ಆರೋಪಿಗಳು ಯಲಹಂಕ, ಕೆ.ಜಿ ಹಳ್ಳಿ ಹಾಗೂ ಸಂಪಿಗೆ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿಯೂ ತಮ್ಮ ಕೈಚಳಕ ತೋರಿಸಿದ್ದರು. ಇದೇ ರೀತಿ ಕಿಯಾ ಕಾರ್ ಕದ್ದು ತಮಿಳುನಾಡಿಗೆ ಹೋಗುವಾಗ ಆರೋಪಿಗಳು ಚೆಕ್ಪೋಸ್ಟ್ಗೆ ಗುದ್ದಿ ಎಸ್ಕೇಪ್ ಆಗಿರುವ ಹಿನ್ನೆಲೆಯಲ್ಲಿ ಅಲ್ಲಿನ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ: ಬೆಳಗಾದ್ರೆ ಮದುವೆ... ಅಷ್ಟರಲ್ಲೇ ವರ ನೇಣಿಗೆ ಶರಣು!