ಬೆಂಗಳೂರು : ಗಂಡ-ಹೆಂಡತಿ ಸೋಗಿನಲ್ಲಿ ಜುವೆಲ್ಲರಿ ಶಾಪ್ಗೆ ನುಗ್ಗಿದ ಜೋಡಿಯೊಂದು ಚಿನ್ನದ ಸರ ಎಗರಿಸಿ ಪರಾರಿಯಾದ ಘಟನೆ ಕಳೆದ ನವೆಂಬರ್ 10 ರಂದು ಮುರುಗೇಶ್ ಪಾಳ್ಯದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮುರುಗೇಶ್ ಪಾಳ್ಯದ ನವರತನ್ ಜ್ಯುವೆಲ್ಲರ್ಸ್ಗೆ ನುಗ್ಗಿದ ಖರ್ತನಾಕ್ ಜೋಡಿ, ಅಂಗಡಿ ಮಾಲೀಕ ಒಬ್ಬನೇ ಇರುವುದನ್ನು ಗಮನಿಸಿ, ಟ್ರಯಲ್ ನೋಡುವ ನೆಪದಲ್ಲಿ ಎರಡು ಚಿನ್ನದ ಸರ ಎಗರಿಸಿ ಕಾಲ್ಕಿತ್ತಿದೆ. ಕಳ್ಳತನದ ದೃಶ್ಯ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಜ್ಯುವೆಲ್ಲರಿ ಅಂಗಡಿಗೆ ಇಬ್ಬರು ಖದೀಮರು ದಂಪತಿ ಸೋಗಿನಲ್ಲಿ ಬಂದಿದ್ದರು. ಕಳ್ಳಿ ಟ್ರಯಲ್ ನೋಡುವ ನೆಪದಲ್ಲಿ ಎರಡು ಚಿನ್ನದ ಸರ ಪಡೆದು, ಅದನ್ನು ಕತ್ತಿಗೆ ಹಾಕಿಕೊಂಡಿದ್ದಳು. ಬಳಿಕ ಹಣ ಕಡಿಮೆ ಇದೆ ಎನ್ನುವ ರೀತಿ ಸ್ವಲ್ಪ ಹಣವನ್ನು ಅಂಗಡಿಯವನ ಮುಂದೆ ಎಣಿಸಿದ್ದಳು. ನಂತರ ಎಟಿಎಂ ಕಾರ್ಡ್ ಸ್ವೈಪ್ ಮಾಡ್ತೀರಲ್ಲ ಎಂದು ಅಂಗಡಿಯವನನ್ನು ಪ್ರಶ್ನಿಸಿದ್ದಾಳೆ. ಕಾರ್ಡ್ ಸ್ವೈಪ್ ಮಾಡ್ತೀವಿ ಎಂದಾಗ, ಜೊತೆಯಲ್ಲಿ ಬಂದಿದ್ದವನಿಗೆ ಬೈಕ್ ಡಿಕ್ಕಿಯಲ್ಲಿ ಎಟಿಎಂ ಕಾರ್ಡ್ ಇದೆ, ಕೊಡು ಎಂದು ಐನಾತಿ ಕಳ್ಳಿ ಹೊರ ಹೋಗಿದ್ದಾಳೆ. ಅಷ್ಟರಲ್ಲಿ, ಮೊದಲೇ ಪ್ಲಾನ್ ಮಾಡಿದಂತೆ ಹೊರಗಡೆ ನಿಂತಿದ್ದ ವ್ಯಕ್ತಿ ಸ್ಕೂಟರ್ ಸ್ಟಾರ್ಟ್ ಮಾಡಿದ್ದ. ಎಟಿಎಂ ಕಾರ್ಡ್ ತರಲೆಂದು ಹೊರ ಹೋದ ಯುವತಿ ತಕ್ಷಣ ಬೈಕ್ ಏರಿ ಕುಳಿತಿದ್ದಾಳೆ. ತಕ್ಷಣ ಇಬ್ಬರು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.
ಘಟನೆ ಸಂಬಂಧ ಜ್ಯುವೆಲ್ಲರಿ ಶಾಪ್ ಮಾಲೀಕ ಕಿಶನ್ ಲಾಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳು ಕೃತ್ಯಕ್ಕೆ ಬಳಸಿದ ಬೈಕ್ ನಂಬರ್ ಪ್ಲೇಟ್ ಹಾಗೂ ಸಿಸಿಟಿವಿ ದೃಶ್ಯ ಆಧರಿಸಿ, ಜೀವನ್ ಭೀಮಾನಗರ ಠಾಣೆ ಪೊಲೀಸರು ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.