ಬೆಂಗಳೂರು: ಸರಗಳ್ಳತನ ಮತ್ತು ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿ 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಬೊಮ್ಮನಹಳ್ಳಿಯ ಸಲ್ಮಾನ್ ಖಾನ್ ಹಾಗೂ ಅರ್ಬಾಜ್ ಖಾನ್ ಬಂಧಿತ ಆರೋಪಿಗಳು. ಇದರಿಂದ ಬಂಧಿತರ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 10 ಪ್ರಕರಣಗಳನ್ನು ಬೇಧಿಸಿದಂತಾಗಿದೆ.
ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜು. 6ರಂದು ದೂರುದಾರ ವೇಣುಗೋಪಾಲ್ ಎಂಬುವವರು ತಮ್ಮ ಗ್ಯಾಸ್ ಏಜೆನ್ಸಿಗೆ ಹೋಗಿ ಗ್ಯಾಸ್ ಸಿಲಿಂಡರ್ ಕೊಡಲು ಕನಕಪುರ ರಸ್ತೆಯಲ್ಲಿರುವ ಎಸ್.ಎಂ. ಅಂಗಡಿಗೆ ಡೆಲಿವರಿ ಕೊಟ್ಟಿದ್ದಾರೆ. ಬಳಿಕ ಸಾರಕ್ಕಿ ಮಾರ್ಕೆಟ್ ಹತ್ತಿರ ಇರುವ ವಾಸವಿ ಆಸ್ಪತ್ರೆ ಬಳಿ ಹೋಗುವಾಗ ಆರೋಪಿಗಳಿಬ್ಬರು ನೀಲಿ ಮತ್ತು ಬಿಳಿ ಬಣ್ಣದ ಹೊಂಡಾ ಡಿಯೋ ಬೈಕ್‌ನಲ್ಲಿ ಬಂದು ಏಕಾಏಕಿ ಚಾಕು ತೋರಿಸಿ 37,450 ರೂ.ಗಳನ್ನು ಕಿತ್ತುಕೊಂಡು ಹೋಗಿದ್ದಾರೆಂದು ದೂರು ನೀಡಿದ್ದರು. ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆಗಿಳಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳ ಬಂಧನದಿಂದ ಕುಮಾರಸ್ವಾಮಿ ಲೇಔಟ್, ಬಸವನಗುಡಿ ಠಾಣೆ ತಲಾ 2 ಪ್ರಕರಣ, ತಲಘಟ್ಟಪುರ, ಪುಟ್ಟೇನಹಳ್ಳಿ, ಸಿದ್ದಾಪುರ, ಸಿ.ಕೆ.ಅಚ್ಚುಕಟ್ಟು, ಹನುಮಂತ ನಗರ, ಹುಳಿಮಾವು ಠಾಣೆಗಳ ತಲಾ 1 ಪ್ರಕರಣಗಳು ಪತ್ತೆಯಾಗಿವೆ. ಸರಗಳವು ಮತ್ತು ಸುಲಿಗೆ ಮಾಡಿದ್ದು, ಒಟ್ಟು 10 ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳಿಂದ 10 ಲಕ್ಷ ರೂ. ಮೌಲ್ಯದ 209 ಗ್ರಾಂನ 8 ಚಿನ್ನದ ಮಾಂಗಲ್ಯ ಸರ, 4 ಕೆಜಿ ಬೆಳ್ಳಿಯ ಸಾಮಾನು, 9,500 ರೂ. ನಗದನ್ನು ಹಾಗೂ ಕೃತ್ಯಕ್ಕೆ ಬಳಸಿದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ. ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಶೋಧ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.