ಬೆಂಗಳೂರು: ಉಕ್ರೇನ್-ರಷ್ಯಾ ಯುದ್ಧ ಭಾರತದ ಆರ್ಥಿಕತೆಯ ಮೇಲೂ ಪರಿಣಾಮ ಬೀರಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಖಾಸಗಿ ಹೋಟೆಲ್‌ನಲ್ಲಿ ಆತ್ಮನಿರ್ಭರ ಅರ್ಥವ್ಯವಸ್ಥೆ ಮೇಲಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉಕ್ರೇನ್ - ರಷ್ಯಾ ಯುದ್ಧ ಭಾರತದ ಮೇಲೂ ಪರಿಣಾಮ ಬೀರಿದೆ. ಕಚ್ಚಾ ತೈಲಗಳ ದರ ಹೆಚ್ಚಳ ಆಗಿದೆ. ಭಾರತ 80% ಕಚ್ಚಾತೈಲ ಆಮದು ಮಾಡಿಕೊಳ್ಳುತ್ತಿದೆ. ಪೆಟ್ರೋಲಿಯಂ ಕಂಪೆನಿಗಳು ತೈಲ ದರ ನಿರ್ಧರಿಸಲಿವೆ. ಪರ್ಯಾಯ ಮೂಲಗಳಿಂದ ತೈಲ ಆಮದು ಬಗ್ಗೆ ಚಿಂತನೆ ನಡೆಯುತ್ತಿದೆ ಎಂದರು.
ರಷ್ಯಾ ಮತ್ತು ಉಕ್ರೇನ್ ಶೇ 30ರಷ್ಟು ಗೋಧಿ ರಫ್ತು ಮಾಡುತ್ತವೆ. ಯುದ್ಧದಿಂದಾಗಿ ರಫ್ತು ನಿಂತಿದೆ. ಭಾರತದ ರೈತರೇ ಸಾಕಷ್ಟು ಗೋಧಿ ಉತ್ಪಾದಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ನಾವು ಜಾಗತಿಕ ದೃಷ್ಟಿಕೋನದಿಂದ ಈ ಸವಾಲನ್ನು ಸ್ವೀಕರಿಸಬೇಕಿದೆ. ನಾವು ಜಗತ್ತಿಗೆ ಗೋಧಿ ಪೂರೈಸುವಲ್ಲೂ ಆತ್ಮನಿರ್ಭರತೆ ಸಾಧಿಸುತ್ತೇವೆ ಎಂದು ಹೇಳಿದರು.
ಆಮದು ಕಡಿಮೆ ಮಾಡಲು ಸುಂಕ ಹೆಚ್ಚಳ: ಆಮದು ಮೇಲಿನ ಸುಂಕ ಹೆಚ್ಚಳ ಬಗ್ಗೆ ಕೆಲವರು ಆಕ್ಷೇಪಿಸಿದ್ದಾರೆ. ನಮ್ಮಲ್ಲಿ ತಯಾರಾಗುವ ವಸ್ತುಗಳನ್ನು ಇಲ್ಲಿಯವರು ಖರೀದಿಸಬೇಕು. ನಮ್ಮ ವಸ್ತುಗಳ ಖರೀದಿಸದೇ ವಿದೇಶಗಳ ಮೇಲೆ ಹಲವರು ಅವಲಂಬಿತರಾಗಿದ್ದಾರೆ. ಹಾಗಾಗಿ ಆಮದು ಮೇಲೆ ಸುಂಕ ಹೆಚ್ಚಿಸಲಾಯಿತು. ಇಲ್ಲೇ ತಯಾರಾಗ್ತಿರುವ ಉತ್ಪನ್ನಗಳ ಮೇಲೆ ಸುಂಕ ಕಮ್ಮಿ ಮಾಡಿದ್ದೇವೆ ಎಂದು ವಿವರಿಸಿದರು.
ಎಲ್ಲಾ ರಾಜ್ಯಗಳಿಗೂ ಸಮಾನ ಅನುದಾನ ಹಂಚಿಕೆಯಾಗಿದೆ. ಯಾವುದೇ ತಾರತಮ್ಯ ಮಾಡಿಲ್ಲ ಎಂದು ಕೇಂದ್ರ ಸಚಿವೆ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ವಾಹನ ಸವಾರರೇ ಎಚ್ಚರ: ಟ್ರಾಫಿಕ್ ಪೊಲೀಸರಿಗೆ ಬಂದಿದೆ ಬಾಡಿವೋರ್ನ್ ಕ್ಯಾಮರಾ