ಬೆಂಗಳೂರು: ಕೊರೊನಾದಂತಹ ಮಹಾಮಾರಿ ಬಂದ್ರೂ ನಗರದ ಮಾರುಕಟ್ಟೆಗಳ ಕೊಳಕು ಪರಿಸ್ಥಿತಿ ಸರಿಯಾಗಿಲ್ಲ. ಶಿವಾಜಿನಗರದ ರಸೆಲ್ ಮಾರುಕಟ್ಟೆಯ ಸುತ್ತಮುತ್ತ ಇಂದಿಗೂ ಜನ ಓಡಾಡುವ ಹಾಗಿಲ್ಲ. ರಾಶಿಗಟ್ಟಲೆ ಕಸ, ಮಾಂಸದ ತ್ಯಾಜ್ಯ, ಚರಂಡಿಗಳ ಕೊಳಚೆ ನೀರು ರಸ್ತೆಯಲ್ಲೇ ಹರಿಯುತ್ತಿದೆ.
ಕೊರೊನಾ ಬಂದ ಬಳಿಕ ತಿಂಗಳುಗಟ್ಟಲೇ ಮಾರುಕಟ್ಟೆ ಬಂದ್ ಮಾಡಲಾಗಿತ್ತು. ಈಗ ಮಾರುಕಟ್ಟೆ ತೆರೆದಿದ್ರೂ ಕೂಡಾ ಗಲೀಜು ಇರುವ ಸ್ಥಿತಿಗೆ ಜನರೇ ಹೋಗುತ್ತಿಲ್ಲ. ಬಿಬಿಎಂಪಿ ಅಧಿಕಾರಿಗಳು ಇತ್ತ ಸುಳಿದೇ ಇಲ್ಲ. ಮೀನು ಮಾರುಕಟ್ಟೆಯ ಸುತ್ತಲಿನ ಚರಂಡಿಗಳು ಬ್ಲಾಕ್ ಆಗಿ ಎರಡು ತಿಂಗಳಾಗಿದೆ. ವ್ಯಾಪಾರಿಗಳು ಎಷ್ಟೇ ದೂರು ಕೊಟ್ರೂ ಪಾಲಿಕೆ ಅಧಿಕಾರಿಗಳು ಕ್ಯಾರೇ ಅನ್ನುತ್ತಿಲ್ಲ.
ಮಾರುಕಟ್ಟೆಯ ಕಸ ಕೂಡಾ ರಸ್ತೆಯಲ್ಲೇ ಡಂಪ್ ಮಾಡಲಾಗ್ತಿದೆ. ಮೂರು ದಿನಕ್ಕೊಮ್ಮೆ ಅಲ್ಲಿಂದ ಜೆಸಿಬಿ ಮೂಲಕ ಕಾಂಪ್ಯಾಕ್ಟರ್ಗೆ ಹಾಕಿ ಸಾಗಿಸಲಾಗ್ತಿದೆ. ಆದರೆ, ಕಸದಿಂದ ಸುರಿಯುವ ಲಿಚೆಟ್ ನೀರು ರಸ್ತೆಗಳಲ್ಲೇ ನಿಂತಿರುತ್ತೆ. ಅದರಿಂದ ಬರುವ ದುರ್ವಾಸನೆಗೆ ಜನ ಮಾರುಕಟ್ಟೆ ಹತ್ತಿರ ಸುಳಿದಾಡಲೂ ಆಗುವುದಿಲ್ಲ ಎಂದು ವ್ಯಾಪಾರಿಗಳು ದೂರು ನೀಡಿದ್ದಾರೆ.
ಚರಂಡಿಯನ್ನು ಪದೇಪದೆ ರಿಪೇರಿ ಮಾಡಿದ್ರೂ ಕಳಪೆ ಗುಣಮಟ್ಟದಲ್ಲಿರೋದ್ರಿಂದ ಮತ್ತೆ ಮತ್ತೆ ಬ್ಲಾಕ್ ಆಗ್ತಿದೆ. ಅಧಿಕಾರಿಗಳು ಈ ಹಿಂದೆ ವೈಜ್ಞಾನಿಕವಾಗಿ ಮಾಂಸದ ತ್ಯಾಜ್ಯ ಪುನರ್ಬಳಕೆ ಮಾಡಲಾಗುವುದು. ಮಾರುಕಟ್ಟೆಯ ಸ್ವಚ್ಛತೆ ಕಾಪಾಡಲಾಗುವುದು ಎಂದು ಆಶ್ವಾಸನೆ ಕೊಟ್ರೂ ವರ್ಷ ಕಳೆದ್ರೂ ಮಾರುಕಟ್ಟೆ ಸ್ಥಿತಿ ಸುಧಾರಿಸಿಲ್ಲ.
ಕೊರೊನಾದಿಂದಾಗಿ ನಗರದಲ್ಲೆಡೆ ಸ್ವಚ್ಛತೆ ಕಾಪಾಡಲಾಗ್ತಿದೆ. ಸೋಂಕು ನಿವಾರಕ ಔಷಧಿ ಸಿಂಪಡಿಸಲಾಗ್ತಿದೆ ಎಂದು ಬಿಬಿಎಂಪಿ ಆಯುಕ್ತರು, ಮೇಯರ್ ಪದೇಪದೆ ಹೇಳ್ತಾರೆ. ಆದರೆ, ದಿನಕ್ಕೆ ನೂರಾರು ಜನ ಓಡಾಡುವ ಶಿವಾಜಿನಗರ ಮಾರುಕಟ್ಟೆ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿದೆ. ಈಗಾಗಲೇ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇನ್ನೂ ನೈರ್ಮಲ್ಯ ಕಾಪಾಡದೆ ಹೋದ್ರೆ ಶಿವಾಜಿನಗರ ಸುತ್ತಮುತ್ತಲಿನ ಜನ ಭೀಕರ ಪರಿಸ್ಥಿತಿ ಎದುರಿಸಬೇಕಾಗುತ್ತದೆ.