ಬೆಂಗಳೂರು: ನ್ಯಾಯಾಂಗ ನಿಂದನೆ ಅಡಿ ನೋಟಿಸ್ ಜಾರಿ ಮಾಡಿರುವ ವಿಚಾರವಾಗಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್ , ಸುಪ್ರೀಂಕೋರ್ಟ್ ನೇಮಿಸಿರುವ ಕಮಿಟಿ ಮಾಡಿರುವ ಆರೋಪ ಸುಳ್ಳು. ನಾವು ಸುಪ್ರೀಂಕೋರ್ಟ್ ಹಾಗೂ ಸುಪ್ರೀಂಕೋರ್ಟ್ ನೇಮಕ ಮಾಡಿರುವ ಕಮಿಟಿಯ ಸದಸ್ಯರ ಬಗ್ಗೆ ಎಲ್ಲೂ ಮಾತನಾಡಿಲ್ಲ ಎಂದಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಇದರ ಬಗ್ಗೆ ಈ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ವಿಡಿಯೋಗಳನ್ನ ರಿಲೀಸ್ ಮಾಡಿದ್ವಿ. ನಾವು ಕಮಿಟಿಯನ್ನ ನಿಂದನೆ ಮಾಡಿಲ್ಲ ಅಂತ ದಾಖಲೆಗಳಿವೆ. ನಂತರ ಹೈಕೋರ್ಟ್ನಲ್ಲಿ ಕೇಸ್ ದಾಖಲಾಗಿತ್ತು.
ತದನಂತರ ನಾವು ಹೈಕೋರ್ಟ್ಗೆ ಅಪೀಲ್ ಮಾಡಿದ್ವಿ. ಸುಪ್ರೀಂಕೋರ್ಟ್ ನೇಮಕ ಮಾಡಿರೋ ಕಮಿಟಿ ಆಗಿರೋದರಿಂದ ಇದರ ಮೇಲೆ ಹೈಕೋರ್ಟ್ ಯಾವುದೇ ರೀತಿಯ ನ್ಯಾಯ ನೀಡಲು ಸಾಧ್ಯವಿಲ್ಲ. ಹೀಗಾಗಿ ನೀವು ಸುಪ್ರೀಂಕೋರ್ಟ್ನಲ್ಲಿ ಮನವಿ ಮಾಡಿಕೊಳ್ಳುವಂತೆ ಹೈಕೋರ್ಟ್ ಸೂಚಿಸಿದೆ ಎಂದರು.
ಅನ್ಯಾಯದ ಬಗ್ಗೆ ಹೇಳಲು ಹಕ್ಕಿದೆ: ಸದ್ಯ ನಾವು ಸುಪ್ರೀಂಕೋರ್ಟ್ಗೆ ಅಪೀಲ್ ಮಾಡ್ತಿದ್ದೇವೆ. ಎಫ್ಐಆರ್ ಮಾಡೋಕೆ ಸರಿಯಾದ ಕಾರಣ ಇರಬೇಕು. ಪ್ರಜಾಪ್ರಭುತ್ವದಲ್ಲಿ ನಮಗೆ ಆಗ್ತಿರೋ ಅನ್ಯಾಯದ ಬಗ್ಗೆ ಸರ್ಕಾರದ ಮುಂದೆ ಹೇಳಲು ಹಕ್ಕಿದೆ. ಅದನ್ನು ಹೇಳಿದ್ದೇವೆ ಅಷ್ಟೇ. ಬಿಡಿಎ ಕರ್ಮಕಾಂಡದ ಬಗ್ಗೆ ಮಾತನಾಡಿರೋದರಲ್ಲಿ ತಪ್ಪು ಏನಿದೆ?.
ಸುಪ್ರೀಂಕೋರ್ಟ್ ನೇಮಕ ಮಾಡಿರೊ ಸಮಿತಿಗೆ ಸಹಕರಿಸಬೇಡಿ ಅಂತ ನಾವು ಎಲ್ಲೂ ಹೇಳಿಲ್ಲ. ಆದರೆ, ಸುಪ್ರೀಂಕೋರ್ಟ್ ನೇಮಕ ಮಾಡಿರೋ ಕಮಿಟಿ ಮುಂದೆ ನಾವು ಹಾಜರಾಗಲು ಸಮಯ ಕೇಳುತ್ತಿದ್ದೇವೆ. ಅವರು ಸಮಯ ನೀಡಿದ ದಿನ ಹಾಜರಾಗುತ್ತೇವೆ ಎಂದು ತಿಳಿಸಿದರು.
ಒಂದು ಕಡೆಯ ದೂರು ತೆಗೆದುಕೊಂಡು ಎಫ್ಐಆರ್: ಬಿಡಿಎ ಅಧಿಕಾರಿಗಳಿಗೂ ನಾವು ಈಗಾಗಲೇ ಕೇಳಿದ್ದೇವೆ. ನೀವು ದಿನಾಂಕ ಹೇಳಿದ್ರೆ ಅವತ್ತು ಬಂದು ನಮ್ಮ ಸಮಸ್ಯೆಗಳನ್ನ ಹೇಳ್ತೇವೆ. ಎಫ್ಐಆರ್ ಆದ್ರೆ ಏನು ಆಗುತ್ತೆ. ಪೊಲೀಸರು ಎರಡು ಕಡೆಯ ವಿಚಾರಗಳನ್ನ ತಿಳಿದು ಎಫ್ಐಆರ್ ಮಾಡಿದ್ರೆ ಒಳ್ಳೆಯದು.
ಅದನ್ನು ಪೊಲೀಸರು ಮೊದಲು ರೂಢಿ ಮಾಡಿಕೊಳ್ಳಬೇಕು. ಒಂದು ಸೈಡ್ ದೂರು ತೆಗೆದುಕೊಂಡು ಎಫ್ಐಆರ್ ಮಾಡಿದ್ದಾರೆ ಎಂದು ಆರೋಪಿಸಿದರು.
ಓದಿ: ರಮೇಶ್ ಜಾರಕಿಹೊಳಿ ಕೇಸ್ನಿಂದ ಮುಕ್ತರಾದರೆ ಮಂತ್ರಿ ಆಗ್ತಾರೆ : ಸಚಿವ ಮಾಧುಸ್ವಾಮಿ