ಬೆಂಗಳೂರು: ಖಾಸಗಿ ಬಡಾವಣೆ ಡೆವಲಪರ್ಸ್ಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಕರ್ನಾಟಕ ನಗರ ಹಾಗೂ ಗ್ರಾಮಾಂತರ ಯೋಜನಾ ಕಾಯ್ದೆ ತಿದ್ದುಪಡಿಗೆ ಸಂಪುಟ ಸಭೆ ಅಸ್ತು ಅಂದಿದ್ದು, 2015ರ ಈ ಕಾಯ್ದೆಯಲ್ಲಿ ಸಡಿಲಿಕೆ ಮಾಡಲು ಅನುಮೋದನೆ ನೀಡಲಾಗಿದೆ.
ಲಾಕ್ಡೌನ್ ವೇಳೆ ಸಂಕಷ್ಟಕ್ಕೊಳಗಾಗಿರುವ ಲೇಔಟ್ ಡೆವಲಪರ್ಸ್ಗಳಿಗೆ ತಮ್ಮ ಬಡಾವಣೆಯಲ್ಲಿನ ನಿವೇಶನಗಳನ್ನು ಮಾರಾಟ ಮಾಡಲು ಇನ್ನು ಮುಂದೆ ತಮ್ಮ ಬಡಾವಣೆಯ ಪೂರ್ತಿ ಪ್ರದೇಶದ ಮೂಲ ಸೌಕರ್ಯ ಅಭಿವೃದ್ಧಿ ಮಾಡುವ ಅಗತ್ಯ ಇಲ್ಲ. ಬಡಾವಣೆ ಪ್ರದೇಶದಲ್ಲಿನ ನಿವೇಶನವನ್ನು ಮೂರು ಹಂತಗಳಲ್ಲಿ ಮಾರಾಟ ಮಾಡಲು ಅವಕಾಶ ನೀಡಲಾಗುವುದು ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದರು.
ಮೂಲ ಕಾಯ್ದೆ ಪ್ರಕಾರ ಬಡವಾಣೆ ಅಭಿವೃದ್ಧಿಗೊಳಿಸಿ ಯೋಜನಾ ಅನುಮೋದನೆ ಪಡೆದ ಬಳಿಕ ಪೂರ್ತಿ ಬಡಾವಣೆಯ ಸಂಪೂರ್ಣ ಮೂಲಭೂತ ಸೌಕರ್ಯ ಅಭಿವೃದ್ಧಿಗೊಳಿಸದ ಹೊರತು ನಿವೇಶನವನ್ನು ಮಾರಾಟ ಮಾಡುವ ಹಾಗಿರಲಿಲ್ಲ. ಈಗ ಅದಕ್ಕೆ ಸಡಿಲಿಕೆ ನೀಡಲು ನಿರ್ಧರಿಸಲಾಗಿದೆ. ಅದರ ಪ್ರಕಾರ ಬಡಾವಣೆ ಪ್ರದೇಶವನ್ನು ಬ್ಲಾಕ್ಗಳನ್ನಾಗಿ ವಿಂಗಡಿಸಿ ನಿವೇಶನಗಳನ್ನು ಮೂರು ಹಂತಗಳಲ್ಲಿ ಮಾರಾಟ ಮಾಡಬಹುದಾಗಿದೆ. ಮೊದಲ ಹಂತದಲ್ಲಿ 40% ನಿವೇಶನ ಮಾರಾಟ ಮಾಡಬಹುದು. ಎರಡನೇ ಹಂತದಲ್ಲಿ 30% ಮತ್ತು ಮೂರನೇ ಹಂತದಲ್ಲಿ ಉಳಿದ ನಿವೇಶನಗಳನ್ನು ಮಾರಾಟ ಮಾಡಬಹುದಾಗಿದೆ ಎಂದು ವಿವರಿಸಿದರು.
ಆದರೆ 40% ಪ್ರದೇಶದ ನಿವೇಶನ ಮಾರಾಟ ಮಾಡುವ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯ ಸಂಪೂರ್ಣವಾಗಿ ಅಭಿವೃದ್ಧಿಯಾಗಿರಬೇಕು. ಅದೇ ರೀತಿ ಎರಡನೇ ಮತ್ತು ಮೂರನೇ ಹಂತಗಳಲ್ಲಿನ 30% ಬ್ಲಾಕ್ ಪ್ರದೇಶದಲ್ಲಿನ ನಿವೇಶನಗಳ ಮಾರಾಟ ಮಾಡಲು ಆ ವ್ಯಾಪ್ತಿಯ ಮೂಲ ಸೌಕರ್ಯ ಸಂಪೂರ್ಣವಾಗಿ ಅಭಿವೃದ್ಧಿಯಾಗಿರಬೇಕು ಎಂದು ತಿಳಿಸಿದರು.