ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಶ್ರೀಮಂತರ ಮಕ್ಕಳ ಐಷಾರಾಮಿ ಕಾರುಗಳ ಹಾವಳಿ ಹೆಚ್ಚುತ್ತಿದ್ದು, ಸಾಮಾನ್ಯರು ರಸ್ತೆಯಲ್ಲಿ ಓಡಾಡಲು ಭಯಪಡುವಂತಾಗಿದೆ. ಸದ್ಯ ಫನ್ ವರ್ಲ್ಡ್ ಮಾಲಿಕ ವಿನಯ್ ಕುಮಾರ್ ಸಬರ್ವಾಲ್ ಪುತ್ರ ಸನ್ನಿ ಸಬರ್ವಾಲ್ ತನ್ನ ಕಾರಿನಲ್ಲಿ ಸ್ಟಂಟ್ ಮಾಡಲು ಹೋಗಿ ಅಪಘಾತ ಮಾಡಿದ್ದಾನೆ.
ಕಬ್ಬನ್ ಪಾರ್ಕ್ ಬಳಿ ಇರುವ ಪೊಲೀಸ್ ಚೌಕಿಗೆ ಸನ್ನಿ ಸಬರ್ವಾಲ್ ತನ್ನ ಕಾರನ್ನು ನುಗ್ಗಿಸಿದ್ದು, ಪೊಲೀಸ್ ಚೌಕಿ ಜಖಗೊಂಡಿದೆ. ಪೊಲೀಸ್ ಚೌಕಿಗೆ ಕಾರು ನುಗ್ಗಿಸಿದ್ದು ಮಾತ್ರವಲ್ಲದೆ ನಂತರ ಅದರ ಮುಂದೆ ನಿಂತು ಫೋಟೊ ಸಹ ಕ್ಲಿಕ್ಕಿಸಿಕೊಂಡಿದ್ದಾನೆ.
ಕಾರು ಅಪಘಾತದ ವಿಡಿಯೋ ಹಾಗೂ ಜಖಂಗೊಂಡಿರುವ ಪೊಲೀಸ್ ಚೌಕಿಯ ಫೋಟೊವನ್ನು ಸನ್ನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಕೆಲ ದಿನಗಳ ಹಿಂದಷ್ಟೇ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಕಾರು ಗುದ್ದಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ ಪೊಲೀಸರು, ಭಾನುವಾರ ಸಿಟಿಯಲ್ಲಿ ಓಡಾಡಿದ್ದ ಐಷಾರಾಮಿ ಕಾರುಗಳ ಕುರಿತು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ.