ಬೆಂಗಳೂರು: ಮಾಜಿ ಪ್ರಧಾನಿ ಸಿ ಚಂದ್ರಶೇಖರ್ ಕುರಿತ ದಿ ಲಾಸ್ಟ್ ಐಕಾನ್ ಆಫ್ ಐಡಿಯಾಲಾಜಿಕಲ್ ಪೊಲಿಟಿಕ್ಸ್ ಪುಸ್ತಕ ಬಿಡುಗಡೆ ಕಾರ್ಯಕ್ರಮ ಇಂದು ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯಿತು.
ಬೆಂಗಳೂರಿನ ಕುಮಾರಕೃಪ ರಸ್ತೆಯ ಗಾಂಧಿ ಭವನದಲ್ಲಿ ಭಾರತ ಯಾತ್ರಾ ಕೇಂದ್ರ ಹಾಗೂ ಬಯಲು ಪರಿಷತ್ ಆಯೋಜಿಸಿದ್ದ ಸಮಾರಂಭದಲ್ಲಿ ಹರಿವಂಶ ಮತ್ತು ರವಿದತ್ತ ವಾಜಪೇಯಿ ಬರೆರಿರುವ ದಿ ಲಾಸ್ಟ್ ಐಕಾನ್ ಆಫ್ ಐಡಿಯಾಲಾಜಿಕಲ್ ಪೊಲಿಟಿಕ್ಸ್ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಸಮಾರಂಭದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಬಿ ಎಲ್ ಶಂಕರ, ಮಾಜಿ ಶಾಸಕ ವೈವಿಎಸ್ ದತ್ತ ಸೇರಿ ಹಲವು ಗಣ್ಯರು ಭಾಗವಹಿಸಿದ್ದರು.
ಲೇಖಕ ಹಾಗೂ ರಾಜ್ಯಸಭೆ ಉಪಸಭಾಪತಿ ಹರಿವಂಶ್ ಮಾತನಾಡಿ, ಚಂದ್ರಶೇಖರ್ ತಮ್ಮ ತತ್ತ್ವ ಸಿದ್ಧಾಂತಗಳ ಜೊತೆ ಯಾವತ್ತೂ ರಾಜಿ ಆದವರಲ್ಲ, ಇವತ್ತಿನ ನಮ್ಮ ಯುವ ಜನತೆಯರು ಇದನ್ನ ಓದಬೇಕು. ಮೋಟಿವೇಷನ್‌ಗೆ ಇದಕ್ಕಿಂತ ಮತ್ತೊಂದು ಉತ್ತಮ ಪುಸ್ತಕವಿಲ್ಲ ಎಂದು ಹೇಳಿದ್ದಾರೆ.
ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾತನಾಡಿ, ನಾನು ಮತ್ತು ಅಂದು ಕೇಂದ್ರ ಸಚಿವರಾಗಿದ್ದ ಅನಂತ್ ಕುಮಾರ್ ಕಾಲೇಜು ದಿನಗಳಲ್ಲಿ ಸಹಪಾಠಿಗಳು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಒಟ್ಟಾಗಿ ಹೋರಾಡಿದ್ದೆವು. ಅಂದಿನ ಹೋರಾಟದಲ್ಲಿ ಚಂದ್ರಶೇಖರ ಅವರ ಪಾತ್ರ ಪ್ರಮುಖವಾಗಿತ್ತು. ಅಂದು ಅವರೊಂದಿಗೆ ಹುಬ್ಬಳ್ಳಿ- ಧಾರವಾಡ ಪಾದಯಾತ್ರೆಯಲ್ಲಿ ಪಾಲ್ಗೊಡಿದ್ದೆ. ಅಂದು ಹೋರಾಟಕ್ಕೆ ಸಿಕ್ಕೆ ಬೆಂಬಲ ಯಾವತ್ತೂ ಸಿಕ್ಕಿಲ್ಲ ಎಂದರು.
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾತನಾಡಿ, ಚಂದ್ರಶೇಖರ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಲೋಕಸಭೆ ಪ್ರವೇಶಿದರು. ಇಂದಿರಾಗಾಂಧಿ ಜನಸೇವೆ ಮಾಡಲು ಬಯಸಿದ್ದೇನೆ, ಸಹಕಾರ ನೀಡಿ ಎಂದಾಗ ಸೋಷಿಯಲಿಸ್ಟ್ ಪಕ್ಷದ ಮೂಲಕ ಬೆಂಬಲ ನೀಡಿದವರು ಅವರು ಎಂದರು. ಯಾವುದೇ ರಾಜಕೀಯ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ. ನಾನು ಪ್ರತಿನಿಧಿಸುವ ಪಕ್ಷವೂ ಸೇರಿದಂತೆ ಎಲ್ಲಿಯೂ ಪ್ರಜಾಪ್ರಭುತ್ವ ಇಲ್ಲ. ಆಂತರಿಕ ಪ್ರಜಾಪ್ರಭುತ್ವವನ್ನು ಕಾಂಗ್ರೆಸ್ ಪಕ್ಷಕ್ಕೆ ತಂದುಕೊಡುವ ಕಾರ್ಯವನ್ನು ಚಂದ್ರಶೇಖರ ಮಾಡಿದ್ದರು. ಇದರಿಂದ ಅತಿ ಹೆಚ್ಚುಮತಗಳ ಅಂತರದ ಗೆಲುವನ್ನು ಜನ ಕೊಟ್ಟಿದ್ದರು ಎಂದು ಚಂದ್ರಶೇಖರ್ ಬಗ್ಗೆ ಮಾತನಾಡಿದ್ದಾರೆ.