ಬೆಂಗಳೂರು: ರಾಜ್ಯದ 17 ಕ್ಷೇತ್ರಗಳ ಪೈಕಿ 15 ಅನರ್ಹ ಶಾಸಕರ ಕ್ಷೇತ್ರಗಳಿಗೆ ಕಾಂಗ್ರೆಸ್ ಪಕ್ಷ ತಮ್ಮ ಅಭ್ಯರ್ಥಿಗಳ ಆಯ್ಕೆಯ ಅಂತಿಮ ಕಸರತ್ತು ನಡೆಸಿದೆ. ಮಸ್ಕಿ ಹಾಗೂ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದು, ಕಾಂಗ್ರೆಸ್ ಪಾಲಿಗೆ ಈ ಕ್ಷೇತ್ರಗಳ ಗೆಲುವು ಅತ್ಯಂತ ಪ್ರತಿಷ್ಠೆಯಾಗಿ ಪರಿಣಮಿಸಿದೆ.
ಇಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಮಹತ್ವದ ಸಭೆ ಕರೆಯಲಾಗಿದ್ದು ಎಲ್ಲಾ 15 ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳ್ಳುವ ಸಾಧ್ಯತೆ ಹೆಚ್ಚಿದೆ. ಚುನಾವಣೆ ಘೋಷಣೆಗೆ ಮುನ್ನವೇ ಸಾಕಷ್ಟು ಸಿದ್ಧತೆ ನಡೆಸಿರುವ ರಾಜಕೀಯ ಪಕ್ಷಗಳು ಇದೀಗ ಚುನಾವಣಾ ದಿನಾಂಕ ಘೋಷಣೆಯಾದ ನಂತರ ಇನ್ನಷ್ಟು ಚುರುಕಾಗಿವೆ. ನಾಮಪತ್ರ ಸಲ್ಲಿಕೆಗೆ ಸೆಪ್ಟೆಂಬರ್ 30 ಕಡೆಯ ದಿನಾಂಕವಾಗಿದ್ದು, ಕೆಲ ಕ್ಷೇತ್ರಗಳಲ್ಲಿ ಸ್ಪರ್ಧೆ ಏರ್ಪಟ್ಟಿದೆ. ಇನ್ನೂ ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿಯ ಆಯ್ಕೆ ಬಹುತೇಕ ಅಂತಿಮವಾಗಿದೆ.
17 ಕ್ಷೇತ್ರಗಳ ಪೈಕಿ 14ರಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಈಗ ಕಳೆದುಕೊಂಡಿರುವ ಅಷ್ಟೂ ಕ್ಷೇತ್ರಗಳನ್ನು ಕೈವಶ ಮಾಡಿಕೊಳ್ಳುವ ನಿಟ್ಟಿನಲ್ಲಿ ಕಾರ್ಯ ತಂತ್ರ ಹೆಣೆಯುತ್ತಿದೆ. ಇದೀಗ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಕೂಡ ಬಹುತೇಕ ಪೂರ್ಣಗೊಂಡಿದೆ.
ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ :
- ಹೊಸಕೋಟೆ - ಪದ್ಮಾವತಿ ಬೈರತಿ
- ಗೋಕಾಕ್ - ಲಕನ್ ಜಾರಕಿಹೊಳಿ
- ಕಾಗವಾಡ - ಪ್ರಕಾಶ್ ಹುಕ್ಕೇರಿ
- ಅಥಣಿ - ಎ ಬಿ ಪಾಟೀಲ್
- ಯಲ್ಲಾಪುರ - ಭೀಮಣ್ಣ ನಾಯ್ಕ್
- ರಾಣೆಬೆನ್ನೂರು - ಕೆ ಬಿ ಕೋಳಿವಾಡ
- ಚಿಕ್ಕಬಳ್ಳಾಪುರ - ಕೇಶವರೆಡ್ಡಿ
- ಹೊಸಪೇಟೆ - ಸಂತೋಷ ಲಾಡ್
- ಕೆ ಆರ್ ಪೇಟೆ- ಕೆ ಬಿ ಚಂದ್ರಶೇಖರ್
- ಯಶವಂತಪುರ - ಸದಾನಂದ
- ಮಹಾಲಕ್ಷ್ಮಿಲೇಔಟ್ - ಮಂಜುನಾಥ್ ಗೌಡ
- ಹುಣಸೂರು - ಹೆಚ್ ಪಿ ಮಂಜುನಾಥ್
- ಹಿರೇಕೆರೂರು - ಜಿ ಡಿ ಪಾಟೀಲ್
- ಕೆಆರ್‌ಪುರ- ಸಿ ಎಂ ಧನಂಜಯ್
- ಶಿವಾಜಿನಗರ- ರಿಜ್ವಾನ್ ಅರ್ಷದ್
ಅಭ್ಯರ್ಥಿಯ ಆಯ್ಕೆ ಇಂದು ಬಹುತೇಕ ಅಂತಿಮಗೊಳ್ಳಲಿದ್ದು, ಎರಡು ದಿನಗಳೊಳಗೆ ಅಭ್ಯರ್ಥಿಗಳಿಗೆ ಬಿ ಫಾರಂ ವಿತರಣೆ ಕೂಡ ಆಗಲಿದೆ.