ಬೆಂಗಳೂರು: ಕೊರೊನಾ ವಿಚಾರವಾಗಿ ಸರ್ಕಾರದ ಪರವಾಗಿ ಆರೋಗ್ಯ ಸಚಿವರು ಇಂದು ಬಿಡುಗಡೆ ಮಾಡಿರುವ ಮುಂಜಾಗ್ರತಾ ಕ್ರಮಗಳ ಪಟ್ಟಿ ವಾಸ್ತವಕ್ಕೆ ದೂರವಾಗಿದೆ ಎಂದು ಸರ್ವಪಕ್ಷ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ರಾಜ್ಯಪಾಲ ವಜುಭಾಯಿ ವಾಲಾ ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಈ ವಿಚಾರದಲ್ಲಿ ಸರ್ಕಾರ ತನ್ನ ವೈಫಲ್ಯವನ್ನು ಒಪ್ಪಿಕೊಳ್ಳಬೇಕೇ ಹೊರತು, ಪ್ರತಿಷ್ಠೆಯಾಗಿ ಪರಿಗಣಿಸಬಾರದು. ನವೆಂಬರ್ 30ರಂದು 2ನೇ ಅಲೆ ಕುರಿತಾಗಿ ತಾಂತ್ರಿಕ ಸಮಿತಿ ಎಚ್ಚರಿಕೆ ನೀಡಿದ್ದರೂ, ನಾವು ಅದನ್ನು ಸರಿಯಾಗಿ ಪಾಲಿಸಲು ಸಾಧ್ಯವಾಗಲಿಲ್ಲ ಎಂದು ಒಪ್ಪಿಕೊಳ್ಳಬೇಕು. ಈ ವಿಚಾರದಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ಏನು ಕ್ರಮ ಕೈಗೊಳ್ಳದೇ, ನಾವು ಎಲ್ಲವನ್ನು ಸರಿಯಾಗೇ ಮಾಡಿದ್ದೇವೆ ಎಂಬ ಸಮರ್ಥನೆ ಬೇಡ. ಸರ್ಕಾರ ಸರಿಯಾಗಿ ಕ್ರಮಕೈಗೊಂಡಿದ್ದರೆ ಈ ಪರಿಸ್ಥಿತಿ ಯಾಕೆ ನಿರ್ಮಾಣವಾಗುತ್ತಿತ್ತು? ನೀವು ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ನಾವು ಎಷ್ಟು ದಿನ ಇರುತ್ತೇವೋ ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ ಎಂದರು.
ಹಾಸಿಗೆ, ರೋಗಿಗಳ ಪರಿಸ್ಥಿತಿ ಬಗ್ಗೆ ನೀವೇ ಒಂದು ರಿಯಾಲಿಟಿ ಚೆಕ್ ಮಾಡಿ. ಕೇವಲ ನಾಲ್ಕು ಸಚಿವರು ಮಾತ್ರ ಸರ್ಕಾರ ಅಲ್ಲ. ಮುಖ್ಯಮಂತ್ರಿಗಳು ಸರ್ಕಾರ ಅಲ್ಲ. ಪಂಚಾಯಿತಿಯಿಂದ ರಾಜ್ಯಮಟ್ಟದವರೆಗೆ ಎಲ್ಲ ಆಡಳಿತ ಯಂತ್ರವೂ ಸರ್ಕಾರವೇ. ಇದನ್ನು ಎಲ್ಲಿ ಬಳಸಿಕೊಳ್ಳಲಾಗಿದೆ. ಎಷ್ಟು ಜನ ಸಚಿವರು, ಜಿಲ್ಲಾ ಮಟ್ಟದಲ್ಲಿ ಸಭೆ ಮಾಡಿದ್ದಾರೆಯೇ? ಇನ್ನು ಮುಂದಾದರೂ ಸಮರೋಪಾದಿಯಲ್ಲಿ ಸರ್ಕಾರ ಕ್ರಮಕೈಗೊಳ್ಳಬೇಕು. ಶಿಕ್ಷಣ ಇಲಾಖೆ, ಆರೋಗ್ಯ, ಸಮಾಜ ಕಲ್ಯಾಣ ಸೇರಿ ಎಲ್ಲ ಇಲಾಖೆಗಳನ್ನು ಒಟ್ಟಾಗಿ ಸೇರಿಸಿಕೊಂಡು ಕಾರ್ಯಪ್ರವೃತ್ತರಾಗಬೇಕು. ಎಲ್ಲರಿಗೂ ಜವಾಬ್ದಾರಿ ವಹಿಸಬೇಕು. ಶವಗಳ ವಿಚಾರವಾಗಿ, ನಮ್ಮ ಧರ್ಮ, ಸಂಸ್ಕೃತಿ ಏನು ಹೇಳುತ್ತದೆ? ಯಾರೇ ಸಾಯುವಾಗ ಅವನಿಗೆ ಗೌರವಯುತ ಅಂತ್ಯ ಸಂಸ್ಕಾರ ಮಾಡಿ ಆತ್ಮಕ್ಕೆ ಶಾಂತಿ ಸಿಗಬೇಕು ಎನ್ನುತ್ತೇವೆ. ಬೆಂಗಳೂರು ಸುತ್ತ ಕೆಲವು ಸರ್ಕಾರಿ ಜಾಗಗಳಲ್ಲಿ ತಾತ್ಕಾಲಿಕ ಸ್ಮಶಾನ ನಿರ್ಮಾಣ ಮಾಡಲು ಸಾಧ್ಯವಿಲ್ಲವೇ? ಸರ್ಕಾರಕ್ಕೆ ಕನಿಷ್ಠ ಪರಿಜ್ಞಾನವೂ ಇಲ್ಲವಾಗಿದೆ ಎಂದರು.
ಸಾವಿನ ಆಡಿಟ್ ಆಗಲಿ
ಸಾವಿನ ವಿಚಾರದಲ್ಲಿ ಆಡಿಟ್ ಆಗಬೇಕು. ಈ ಸಾವುಗಳ ಸಂಖ್ಯೆ, ಅದರಲ್ಲಿ ಸಾವಿಗೆ ಕಾರಣದ ಬಗ್ಗೆ ಮಾಹಿತಿ ಪಡೆಯಬೇಕು. ಸರ್ಕಾರ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸಲಿ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಹೆಚ್ಚಿನ ಗಮನ ಹರಿಸಲಿ. ಆರೋಗ್ಯ ಸೇವೆ ಎಲ್ಲರಿಗೂ ಸಿಗುವಂತೆ ಮಾಡಲು 30 ಸಾವಿರ ಕೋಟಿ ಮೀಸಲಿಡಿ. ನೀವು ಹಿಂದೆ ಘೋಷಿಸಿದ ಪ್ಯಾಕೇಜ್ನಲ್ಲಿ ಯಾರಿಗೆ ಹಣ ತಲುಪಿದೆ ಅಂತಾ ಒಂದು ಪಟ್ಟಿ ಕೊಡಿ. ರೈತರಿಗೆ ಹೇಗೆ ನೆರವಾದಿರಿ ಎಂಬ ಮಾಹಿತಿ ಕೊಡಿ. ಕೇಂದ್ರ ಸರ್ಕಾರದ 20 ಲಕ್ಷ ಕೋಟಿಯಲ್ಲಿ ನಮ್ಮ ರಾಜ್ಯದಲ್ಲಿ ಯಾರಿಗೆ ಅನುಕೂಲವಾಗಿದೆ ಹೇಳಿ. ಔಷಧ ಮತ್ತು ಲಸಿಕೆ ತಯಾರಿಕೆಗೆ ಕೇವಲ 2 ಕಂಪನಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಲಸಿಕೆ ಫಾರ್ಮುಲಾವನ್ನು ಕೊಟ್ಟು ಬೇರೆ ಕಂಪನಿಗಳಲ್ಲೂ ಉತ್ಪಾದನೆ ಮಾಡಿಸಿ ಎಂದರು.
ಈ ಪರಿಸ್ಥಿತಿಯಲ್ಲಿ ಲಸಿಕೆ ರಫ್ತು ಮಾಡದಂತೆ ರಾಜ್ಯಪಾಲರು ಕೇಂದ್ರ ಸರ್ಕಾರಕ್ಕೆ ತಿಳಿಸಲಿ. ನಮ್ಮ ಮಕ್ಕಳನ್ನು ಮೊದಲು ಬದುಕಿಸಿ ಆಮೇಲೆ ಬೇರೆಯವರಿಗೆ ನೀಡಿ. ಔಷಧ ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಡೆಯಿರಿ. ಶಿಕ್ಷಣ ಸಂಸ್ಥೆ, ಮಕ್ಕಳು, ಪೋಷಕರು ಎಲ್ಲರ ಹಿತವನ್ನು ಕಾಪಾಡಿಕೊಂಡು ನಿರ್ಧಾರ ತೆಗೆದುಕೊಳ್ಳಬೇಕು. ಸಾರಿಗೆ ನೌಕರರ ಮುಷ್ಕರ ನಡೆಯುತ್ತಿದೆ. ಅವರ ಜತೆ 5 ನಿಮಿಷ ಕರೆದು ಮಾತನಾಡದಿದ್ದರೆ ಈ ಸರ್ಕಾರ ಇರೋದು ಯಾತಕ್ಕಾಗಿ? ಸರ್ಕಾರ ಈ ಸಮಸ್ಯೆಯನ್ನು ಸರಿಯಾಗಿ ಬಗೆಹರಿಸಿಕೊಳ್ಳಬೇಕು. ರಾಜಕಾರಣದಲ್ಲಿ ನಮಗೆ ಬೇಕಾದಷ್ಟು ಭಿನ್ನಾಭಿಪ್ರಾಯಗಳಿದ್ದರೂ ಮಾನವೀಯತೆ ದೃಷ್ಟಿಯಿಂದ ನಾವು ಸರ್ಕಾರಕ್ಕೆ ಸಹಕಾರ ನೀಡುತ್ತೇವೆ. ಅದಕ್ಕೆ ಬದ್ಧರಾಗಿದ್ದೇವೆ. ಪರೀಕ್ಷೆ ನಡೆಸುವ ವಿಚಾರದಲ್ಲಿ ಪರಿಸ್ಥಿತಿ ಅರಿತು ನಿರ್ಧಾರ ಕೈಗೊಳ್ಳಿ ಎಂದು ತಿಳಿಸಿದ್ದಾರೆ.
ರಾಜ್ಯಪಾಲರ ಕ್ರಮ ಸ್ವಾಗತಾರ್ಹ
ಮುಖ್ಯಮಂತ್ರಿಗಳ ಅನಾರೋಗ್ಯ ಪರಿಸ್ಥಿತಿಯಲ್ಲಿ ರಾಜ್ಯಪಾಲರು ಮಧ್ಯಪ್ರವೇಶಿಸಿ ಈ ಸಭೆ ಕರೆದಿರುವುದನ್ನು ಸ್ವಾಗತಿಸುತ್ತೇವೆ. ಅವರಿಗೆ ಅಧಿಕಾರ ಇದೆಯೋ ಇಲ್ಲವೋ ಅನ್ನೋದು ಬೇರೆ ವಿಚಾರ. ಆದರೆ ಅವರ ಕಾಳಜಿಯನ್ನು ಮೆಚ್ಚುತ್ತೇನೆ. ಕೊರೊನಾ ಸೋಂಕಿಗೆ ತುತ್ತಾಗಿರುವ ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು ಹಾಗೂ ಇತರ ನಾಯಕರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಓದಿ: ಕೊರೊನಾ ಭಯ.. ಹಾವೇರಿಯಲ್ಲಿ ಅನಾಥ ಶವ ಸಾಗಿಸಲು ಹಿಂದೇಟು ಹಾಕಿದ ಜನ..