ಬೆಂಗಳೂರು: ನಕಲಿ ವೆಬ್ಸೈಟ್ ಸೃಷ್ಟಿಸಿ ಸಾರ್ವಜನಿಕರಿಗೆ ಆನ್ಲೈನ್ ಮುಖಾಂತರ ಕೊರೊನಾ ನಿಯಂತ್ರಣ ಔಷಧಿ ನೀಡುವುದಾಗಿ ಕೋಟ್ಯಂತರ ರೂಪಾಯಿ ಹಣ ವಂಚನೆ ಮಾಡುತ್ತಿದ್ದ ಅಂತಾರಾಷ್ಟ್ರೀಯ ಗ್ಯಾಂಗ್ ಅನ್ನು ಬಂಧಿಸುವಲ್ಲಿ ದಕ್ಷಿಣ ವಿಭಾಗ ಡಿಸಿಪಿ ಡಾ. ರೋಹಿಣಿ ಕಟೋಚ್ ನೇತೃತ್ವದ ತಂಡ ಯಶಸ್ವಿಯಾಗಿದೆ.
ಹ್ಯೂಬರ್ಟ್, ಎನ್ದೇಪ್ ಕಾಲೀನ್, ಬದ್ರೂಲ್ ಹಸನ್, ದಿದಾರೂಲ್ ಬಂಧಿತರು. ಇವರು ಬೇರೆ ಬೇರೆ ದೇಶದ ಪ್ರಜೆಗಳಾಗಿದ್ದು, ಜಯನಗರದ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ನಕಲಿ ವೆಬ್ಸೈಟ್ ಸೃಷ್ಟಿಸಿ ಸಾರ್ವಜನಿಕರಿಂದ ತಮ್ಮ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡುತ್ತಿದ್ದರು. ಈಗಾಗಲೇ ಅರೋಪಿಗಳ ವೀಸಾ ಅವಧಿ ಮುಗಿದಿದ್ದು, ಅಕ್ರಮವಾಗಿ ಇನ್ನೂ ರಾಜ್ಯದಲ್ಲೇ ನೆಲೆಸಿದ್ದಾರೆ.
ಹೇಗಿತ್ತು ಇವರ ಮೋಸದ ಜಾಲ:
ಸುಮಾರು 10ಕ್ಕೂ ಹೆಚ್ಚು ನಕಲಿ ವೆಬ್ ಸೈಟ್ ಸೃಷ್ಟಿಸಿಕೊಂಡು ಸದ್ಯ ಎಲ್ಲೆಡೆ ಮಾರಕವಾಗಿರುವ ಕೊರೊನಾ ಸೋಂಕಿಗೆ ವಿಟಮಿನ್ ಔಷಧಿ ಕೊಡುವುದಾಗಿ ಜನರನ್ನು ನಂಬಿಸುತ್ತಿದ್ದರು. ಇದನ್ನು ನಂಬಿ ಬಹುತೇಕರು ಔಷಧಿ ಖರೀದಿಗೆ ಮುಂದಾಗಿದ್ರು. ಅಷ್ಟೇ ಅಲ್ಲದೆ ವಿದೇಶಿ ತಳಿಯ ನಾಯಿ ಮರಿಗಳ ಮಾರಾಟ, ಎಲೆಕ್ಟ್ರಾನಿಕ್ ವಸ್ತುಗಳ ಸರ್ವಿಸ್ ಕೊಡುವುದಾಗಿ ವೆಬ್ಸೈಟ್ ಮುಖಾಂತರ ನಂಬಿಸಿ ಜನರನ್ನು ಮೊಬೈಲ್ ಫೋನ್ ಮುಖಾಂತರ ಸಂಪರ್ಕಿಸಿ ನಂತ್ರ ತಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುವಂತೆ ಹೇಳುತ್ತಿದ್ದರು. ಹಣ ಬಂದ ಬಳಿಕ ಯಾವುದೇ ವಸ್ತು, ಔಷಧಿ ನೀಡದೆ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದರು.
ಸದ್ಯಕ್ಕೆ ಸಾರ್ವಜನಿಕರ ದೂರಿನ ಆಧಾರ ಮೇರೆಗೆ ಅಂತಾರಾಷ್ಟ್ರೀಯ ಜಾಲದ ಖದೀಮರನ್ನು ಪೊಲೀಸರು ಬಂಧಿಸಲಾಗಿದೆ. ಬನಶಂಕರಿ ಠಾಣೆಯಲ್ಲಿ ಐಪಿಸಿ ಸೆಕ್ಷನ್ 419, 420, 34, 66 ಸಿ ಕಾಯ್ದೆಯಡಿ ಅಡಿ ಪ್ರಕರಣ ದಾಖಲಿಸಿ ಆರೋಪಿಗಳಿಂದ ಮೊಬೈಲ್, ಅಕೌಂಟ್ ಪಾಸ್ ಬುಕ್, ಲ್ಯಾಪ್‌ಟಾಪ್ ವಶಪಡಿಸಿಕೊಂಡು ಹೆಚ್ಚಿನ ತನಿಖೆ ಮುಂದುವರಿದಿದೆ.