ಬೆಂಗಳೂರು: ಕೋಲಾರದಲ್ಲಿ ಶುಕ್ರವಾರ ಕೊರೊನಾ ಸೋಂಕಿತನೊಬ್ಬನ ಪರಾರಿ ಪ್ರಕರಣದ ಸಂಬಂಧ ಸಿನಿಮೀಯ ರೀತಿಯಲ್ಲಿ ಬೆಂಗಳೂರು ಪೊಲೀಸರು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಕೋಲಾರದಿಂದ ಸೋಂಕಿತ ಎಸ್ಕೇಪ್ ಆಗ್ತಿದ್ದಂತೆ ಎಚ್ಚೆತ್ತುಕೊಂಡ ಅಧಿಕಾರಿಗಳು ಆತನ ಮೊಬೈಲ್ ಲೊಕೇಷನ್ ಟ್ರೇಸ್ ಮಾಡಿ ಹಿಡಿದಿದ್ದಾರೆ.
ಬೆಂಗಳೂರಿನ ಬಸವನಗುಡಿಯಲ್ಲಿನ ತನ್ನ ಹೆಂಡತಿಯ ತವರು ಮನೆಗೆ ಬಂದು ತಲೆಮರೆಸಿಕೊಳ್ಳಲು ಯತ್ನಿಸಿದ್ದ. ಆರೋಗ್ಯ ಇಲಾಖೆ ಹಾಗೂ ಪೊಲೀಸರ ಜಂಟಿ ಕಾರ್ಯಾಚರಣೆಯಿಂದ ಮಾರ್ಗಮಧ್ಯೆ ಚಾಲಾಕಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಬಿಬಿಎಂಪಿ ಸಿಹೆಚ್ಒ ವಿಜಯೇಂದ್ರ ಮಾಹಿತಿ ನೀಡಿದ್ದಾರೆ.
ಒಂದು ವೇಳೆ ಈ ಕಾರ್ಯಾಚರಣೆ ವಿಫಲವಾಗಿದ್ದರೆ ಗ್ರೀನ್ ಝೋನ್ನಲ್ಲಿದ್ದ ಬಸವನಗುಡಿ ರೆಡ್ ಝೋನ್ ಆಗುತ್ತಿತ್ತು. ಇನ್ನು ಮುನ್ನೆಚ್ಚರಿಕೆ ವಹಿಸಿದ್ದ ಇಲಾಖೆ ಸಿಬ್ಬಂದಿಯು ಸೋಂಕಿತ ವ್ಯಕ್ತಿಯನ್ನು ಸದ್ಯ ನಿಗದಿತ ಆಸ್ಪತ್ರೆಯಲ್ಲಿ ಇರಿಸಿದ್ದಾರೆ.