ಬೆಂಗಳೂರು: ಐಎಂಎ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ರೋಷನ್ ಬೇಗ್ ಅವರಿಗೆ ರಕ್ಷಣೆ ಹಾಗೂ ಮುಕ್ತ ಓಡಾಟಕ್ಕೆ ಅನುವು ಮಾಡಿಕೊಂಡಿ ಎಂದು ಎಸ್ಐಟಿಗೆ ರಾಜ್ಯಪಾಲರು ಬರೆದಿರುವ ಪತ್ರ ಇದೀಗ ವೈರಲ್ ಆಗಿದೆ.
ಐಎಂಎ ವಂಚನೆ ಪ್ರಕರಣದಲ್ಲಿ ರೋಷನ್ ಬೇಗ್ ಭಾಗಿಯಾಗಿರುವ ಕಾರಣ ಜುಲೈ 16, 2019 ರಂದು ಎಸ್ಐಟಿ ತಂಡ ಅವರನ್ನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿತ್ತು.
ಹೀಗಾಗಿ ಎಸ್ಐಟಿ ಮುಖ್ಯಸ್ಥರಾಗಿದ್ದ ರವಿಕಾಂತೇಗೌಡ ಅವರಿಗೆ ರಾಜ್ಯಪಾಲ ವಿ.ಆರ್.ವಜೂಬಾಯಿ ವಾಲಾ ಅವರು ಜುಲೈ 17, 2019 ರಂದು ಪತ್ರ ಬರೆದು, ಅವರ ಮುಕ್ತ ಓಡಾಟಕ್ಕೆ ಅಗತ್ಯ ಕ್ರಮ ಕೈಗೊಳ್ಳಿ ಎಂದು ಸೂಚಿಸಿದ್ದಾರೆ. ಈ ಪತ್ರ ಸದ್ಯ ವೈರಲ್ ಆಗಿದೆ.
ರೋಷನ್ ಬೇಗ್ ಅವರು ಹಣ ಪಡೆದಿದ್ದಾರೆಂದು ಪ್ರಕರಣದ ಎ1ಆರೋಪಿ ಮನ್ಸೂರ್ ಖಾನ್ ಈಗಾಗ್ಲೇ ಬಾಯಿ ಬಿಟ್ಟಿದ್ದಾರೆ. ಅದಕ್ಕೆ ಬೇಕಾದ ಪೂರಕ ಸಾಕ್ಷಿಗಳನ್ನ ಕಲೆ ಹಾಕಿ ಎಸ್ಐಟಿ ತಂಡ ಸಿಬಿಐಗೆ ಕೂಡ ಹಸ್ತಾಂತರ ಮಾಡಿದೆ. ಸದ್ಯ ರಾಜ್ಯಪಾಲರ ಈ ಪತ್ರ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.