ಬೆಂಗಳೂರು: ಲವ್ಜಿಹಾದ್ ತಡೆಗೆ ಕಾನೂನು ತಜ್ಞರ ಜೊತೆ ಚರ್ಚೆ ಮಾಡುತ್ತೇವೆ. ಎಲ್ಲಾ ಸಲಹೆ ಸೂಚನೆ ಆಧಾರದಲ್ಲಿ ಮತಾಂತರ ತಡೆಗೆ ಕಾನೂನು ಪ್ರಕ್ರಿಯೆ ಜಾರಿಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಮುಂದುವರಿಯಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಆರ್ಟಿ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಲವ್ ಜಿಹಾದ್ ಪ್ರಕ್ರಿಯೆಗೆ ಕಡಿವಾಣ ಹಾಕುವ ಕುರಿತು ಬೇರೆ ರಾಜ್ಯಗಳಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಗಮನಿಸುತ್ತಿದ್ದೇವೆ. ಜೊತೆಗೆ ಕಾನೂನು ತಜ್ಞರ ಜೊತೆಯೂ ಚರ್ಚೆ ಮಾಡುತ್ತೇವೆ. ಎಲ್ಲಾ ಸಲಹೆ ಸೂಚನೆ ಆಧಾರದಲ್ಲಿ ಮತಾಂತರ ತಡೆಗೆ ಕಾನೂನು ಪ್ರಕ್ರಿಯೆ ಆರಂಭಿಸುವ ನಿಟ್ಟಿನಲ್ಲಿ ಸರ್ಕಾರ ಮುಂದುವರಿಯಲಿದೆಯೆಂದು ತಿಳಿಸಿದರು.
ದೇಶದಲ್ಲಿ 8-10 ವರ್ಷಗಳಿಂದಲೂ ಈ ಕುರಿತು ಚರ್ಚೆ ಆಗುತ್ತಿದ್ದು ಪ್ರತೀ ಪ್ರಕರಣ ಆದಾಗಲೂ ಲವ್ ಜಿಹಾದ್ ವಿಷಯ ಚರ್ಚೆಗೆ ಬರುತ್ತದೆ. ಹೈಕೋರ್ಟ್ ವ್ಯಾಖ್ಯಾನದ ಬಳಿಕ ಕಾನೂನು ಪ್ರಕ್ರಿಯೆಯ ಚಿಂತನೆ ಆರಂಭವಾಗಿದೆ. ಬೇರೆ ರಾಜ್ಯಗಳಲ್ಲಿ ಏನೇನು ಮಾಡುತ್ತಾರೆಂಬುದನ್ನು ನೋಡಿಕೊಂಡು ನಂತರ ನಾವು ನಮ್ಮ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದರು.
ಇತ್ತೀಚಿನ ದಿನಗಳಲ್ಲಿ ಲವ್ ಜಿಹಾದ್ ಮಾಡುವ ದೃಷ್ಟಿಯಿಂದ ಕೆಲವು ಶಕ್ತಿಗಳು ಸಂಘಟಿತವಾಗಿ ಯುವಕರನ್ನು ದಾರಿ ತಪ್ಪಿಸುವ ಕಾರ್ಯಾಚರಣೆ ಮಾಡುತ್ತಿವೆ. ಲವ್ ಜಿಹಾದ್ ಹೆಸರಿನಿಂದ ಪರಿವರ್ತನೆ ಸರಿಯಲ್ಲ ಎಂದು ಅಹಮದಾಬಾದ್ ಹೈಕೋರ್ಟ್ ಕೂಡಾ ಹೇಳಿದೆ. ಬಳಿಕ ದೇಶದಲ್ಲಿ ವ್ಯಾಪಕ ಚರ್ಚೆ ಆರಂಭವಾಗಿದೆ. ಈಗಿರುವ ಕಾನೂನು ಅಲ್ಲದೇ ವಿಶೇಷ ಕಾನೂನು ಆಗಬೇಕೆಂದು ಕೆಲವರು ಚಿಂತನೆ ಆರಂಭಿಸಿದ್ದಾರೆ. ಕೆಲವು ರಾಜ್ಯಗಳು ಘೋಷಣೆ ಕೂಡಾ ಮಾಡಿವೆ. ಸಂವಿಧಾನದ ಚೌಕಟ್ಟಿನಲ್ಲಿ ಕಾನೂನು ರಚನೆಯಾಗಬೇಕೆಂಬ ಚಿಂತನೆ ನಮ್ಮ ಸರ್ಕಾರದಲ್ಲಿ ಕೂಡಾ ಇದೆ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು.