ಬೆಂಗಳೂರು: ರಾಜ್ಯದಲ್ಲಿ ನಡೆದ ಮುಷ್ಕರಗಳಿಂದ ಆಗಿರುವ ಸಾರ್ವಜನಿಕ ಆಸ್ತಿ ನಷ್ಟದ ಪ್ರಮಾಣ ಅಂದಾಜಿಸಲು ಕ್ಲೇಮು ಕಮೀಷನರ್‌ಗೆ ಸಲಹೆಗಾರರಾಗಿ ನಿಯೋಜಿಸಬಹುದಾದ 255 ಎಂಜಿನಿಯರ್ ಹಾಗೂ ಮೌಲ್ಯಮಾಪಕರ ಪಟ್ಟಿಯನ್ನು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಸಲ್ಲಿಸಿದೆ.
ಮಹದಾಯಿ ನ್ಯಾಯಾಧಿಕರಣದ ತೀರ್ಪು ವಿರೋಧಿಸಿ ಕನ್ನಡ ಪರ ಸಂಘಟನೆಗಳು 2018ರಲ್ಲಿ ನಡೆಸಿದ್ದ ಕರ್ನಾಟಕ ಬಂದ್ ಮತ್ತು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ನಡೆಸಿದ ಬಂದ್ ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರದ ಪರ ವಕೀಲರು, ಬಂದ್ ಮತ್ತು ಪ್ರತಿಭಟನೆಗಳಿಂದ ಆಗಿರುವ ನಷ್ಟದ ಮೊತ್ತ ನಿಖರವಾಗಿ ಅಂದಾಜಿಸಲು ನಿವೃತ್ತ ನ್ಯಾಯಾಧೀಶರನ್ನು ಕ್ಲೇಮು ಕಮೀಷನರ್ ಆಗಿ ನೇಮಕ ಮಾಡುತ್ತೇವೆ. ಇವರಿಗೆ ಅಗತ್ಯ ನೆರವು ಹಾಗೂ ಸಲಹೆಗಳನ್ನು ನೀಡಲು ಸಲಹೆಗಾರರಾಗಿ ಎಂಜಿನಿಯರ್‌ಗಳನ್ನು ನೇಮಿಸಲು ಪಟ್ಟಿ ಸಿದ್ಧಪಡಿಸಿದ್ದೇವೆ ಎಂದು ತಿಳಿಸಿ, 255 ಎಂಜಿನಿಯರ್ಗಳ ಪಟ್ಟಿಯನ್ನು ಪೀಠಕ್ಕೆ ಸಲ್ಲಿಸಿದರು.
ಪಟ್ಟಿ ಪರಿಗಣಿಸಿದ ಪೀಠ, ಅರ್ಜಿದಾರರು ಒದಗಿಸಿರುವ ಪಟ್ಟಿಯಲ್ಲಿರುವ ಹೆಸರುಗಳ ಪೈಕಿ ಯಾರನ್ನು ಕ್ಲೇಮು ಕಮೀಷನರ್ ಅವರ ಸಲಹಾಗಾರರನ್ನಾಗಿ ನಿಯೋಜಿಸಬೇಕು ಎಂಬುದನ್ನು ಸರ್ಕಾರವೇ ಅಂತಿಮವಾಗಿ ತೀರ್ಮಾನಿಸಿ ಅದರ ಮಾಹಿತಿ ನೀಡುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.