ಬೆಂಗಳೂರು: ಪ್ರಚಾರದ ವಿಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಏಕಾಂಗಿಯಾಗಿ ರಾಜ್ಯದ 15 ವಿಧಾನಸಭೆ ಕ್ಷೇತ್ರ ಸುತ್ತುತ್ತಿದ್ದರೆ, ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಅನಾರೋಗ್ಯದ ನೆಪವೊಡ್ಡಿ ಮನೆ ಸೇರಿಕೊಂಡಿದ್ದಾರೆ. ಇನ್ನೊಂದೆಡೆ ಪ್ರಭಾವಿ ನಾಯಕ ಹಾಗೂ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಮಠ, ಮಂದಿರಗಳಿಗೆ ಓಡಾಡಿಕೊಂಡಿದ್ದಾರೆ. ಉಳಿದ ಮೂಲ ಕಾಂಗ್ರೆಸ್ ನಾಯಕರು ಎಲ್ಲಿಯೂ ಪ್ರಚಾರ ಕಣದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವಿನ ಹಾಗೂ ಪ್ರಚಾರದ ವಿಚಾರದಲ್ಲಿ ಕಂಡುಕೊಳ್ಳಬೇಕಾದ ಜನಪ್ರೀಯತೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡಲಿದೆ ಎಂಬ ಮಾತು ಕೇಳಿಬರುತ್ತಿದೆ.
ಮಾಜಿ ಸಚಿವ ಡಿ.ಕೆ. ಶಿವಕುಮಾರ್ ನಾಮಪತ್ರ ಸಲ್ಲಿಕೆ ದಿನ ಹೊಸಕೋಟೆ ಹಾಗೂ ಚಿಕ್ಕಬಳ್ಳಾಪುರದಲ್ಲಿ ಕಾಣಿಸಿಕೊಂಡು ನಿರೀಕ್ಷೆ ಹುಟ್ಟಿಸಿದ್ದರು. ಅದಾದ ಬಳಿಕ ಮನೆಯಲ್ಲಿ ಈ ಎರಡು ಕ್ಷೇತ್ರದ ಉಸ್ತುವಾರಿಗಳ ಜತೆ ಸಭೆ ನಡೆಸಿದ್ದರು. ಇವೆಲ್ಲವನ್ನೂ ಗಮನಿಸಿದಾಗ ಅವರು ಕೆಲ ಕ್ಷೇತ್ರವನ್ನು ಕಾಂಗ್ರೆಸ್ಗೆ ಗೆಲ್ಲಿಸಿಕೊಡುವ ಯತ್ನ ಮಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕಳೆದ ಎರಡು ದಿನದ ಬೆಳವಣಿಗೆ ಹಾಗೂ ನಂತರದ ಅವರ ಎರಡು ದಿನದ ಕಾರ್ಯಕ್ರಮ ಪಟ್ಟಿ ಗಮನಿಸಿದಾಗ ಅಲ್ಲಿ ಪ್ರಚಾರದ ಸುಳಿವು ಕಂಡು ಬರುತ್ತಿಲ್ಲ.
ಇನ್ನೊಂದೆಡೆ ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಮೈತ್ರಿ ಸರ್ಕಾರ ಪತನದ ನಂತರ ಮತ್ತೆ ತೆರೆಮರೆಗೆ ಸರಿದಿದ್ದಾರೆ. ಕಳೆದ ವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಇಂದಿರಾಗಾಂಧಿ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಅನುಪಸ್ಥಿತಿ ಇದ್ದ ಸಂದರ್ಭ ಕಾಣಿಸಿಕೊಂಡದ್ದು ಬಿಟ್ಟರೆ, ಇತ್ತೀಚಿನ ದಿನಗಳಲ್ಲಿ ಅವರು ಪಕ್ಷದ ಚಟುವಟಿಕೆಯಲ್ಲಿ ಗುರುತಿಸಿಕೊಂಡಿಲ್ಲ. ಅಂದು ಕೂಡ ತಮಗೆ ಅನಾರೋಗ್ಯ ಇರುವ ಹಿನ್ನೆಲೆ ಹೊರ ಬರುತ್ತಿಲ್ಲ ಎಂದು ಹೇಳಿ ಉಪಚುನಾವಣೆ ಪ್ರಚಾರದಿಂದಲೂ ದೂರವಿರುವ ಸೂಚನೆ ನೀಡಿದ್ದಾರೆ.
ಪ್ರಚಾರ ಕಣದಲ್ಲಿ ಏಕಾಂಗಿ:
ಇದರಿಂದಾಗಿ ಪ್ರಚಾರ ಕಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಏಕಾಂಗಿಯಾಗಿದ್ದಾರೆ. ಪ್ರತಿಪಕ್ಷ ನಾಯಕ ಸ್ಥಾನ ನೀಡುವ ಸಂದರ್ಭ ತಾವು ವಾಗ್ಧಾನ ನೀಡಿರುವಂತೆ ಅತಿ ಹೆಚ್ಚು ಸ್ಥಾನ ಗೆಲ್ಲಿಸಿಕೊಳ್ಳುವ ಸಲುವಾಗಿ ಉಪಚುನಾವಣೆ ನಡೆಯುವ ಕ್ಷೇತ್ರದಲ್ಲಿ ನಿರಂತರವಾಗಿ ಓಡಾಡಿಕೊಂಡು ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ಇವರು ತೆರಳಿದ ಕಡೆಯೆಲ್ಲಾ ಮೂಲ ಕಾಂಗ್ರೆಸ್ ನಾಯಕರು ಅನುಪಸ್ಥಿತರಾಗುತ್ತಿದ್ದಾರೆ.
ಪಕ್ಷದ ಅಭ್ಯರ್ಥಿಯ ಪರ ಪ್ರಚಾರಕ್ಕೆ ಮೂಲ ಕಾಂಗ್ರೆಸ್ ನಾಯಕರು ತೊಡಗಿಕೊಳ್ಳದಿರುವುದು, ಸಿದ್ದರಾಮಯ್ಯ ಮೇಲಿನ ಮುನಿಸಿಗೆ ಪ್ರಚಾರದಿಂದ ದೂರ ಉಳಿದಿರುವುದು ಮುಂದೆ ಪಕ್ಷದ ಗೆಲುವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಮಾತು ಹೆಚ್ಚಾಗಿ ಕೇಳಿಬರುತ್ತಿದೆ. ಅದು ಸಹಜ ಕೂಡ. ಮುಂದಿನ ದಿನಗಳಲ್ಲಿ ಕೂಡ ಮೂಲ ಕಾಂಗ್ರೆಸಿಗರ ಮುನಿಸು ಮುಂದುವರಿದರೆ, ಕೈ ಅಭ್ಯರ್ಥಿಗಳ ಭವಿಷ್ಯ ಡೋಲಾಯಮಾನವಾಗುವಲ್ಲಿ ಸಂಶಯವಿಲ್ಲ.