ಬೆಂಗಳೂರು: ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡುವಾಗ ತನಿಖೆ ಪೂರ್ಣವಾಗಿಲ್ಲ ಎಂಬ ಅಂಶವು ಚೀನಾ ಮಹಾಗೋಡೆಯಂತೆ ಅಡ್ಡಿಯಾಗಿದೆ ಎಂಬುದು ನ್ಯಾಯಾಲಯ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಇದೇ ವೇಳೆ ಆರೋಪಿಗಳಿಬ್ಬರಿಗೆ ನಿರೀಕ್ಷಣಾ ಜಾಮೀನು ನೀಡಿದೆ.
ಎಸ್ಸಿ ಸಮುದಾಯದ ವ್ಯಕ್ತಿಗೆ ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿದ ಆರೋಪಡಿ ಬಂಧನ ಭೀತಿ ಎದುರಿಸುತ್ತಿದ್ದ ಕೋಲಾರ ಜಿಲ್ಲೆಯ ಅಪ್ಪಾಜಿ ರೆಡ್ಡಿ ಮತ್ತು ಸುಬ್ರಮಣಿ ಎಂಬುವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಜಾತಿ ನಿಂದನೆ ಆಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ಆದರೆ, ಜಾತಿ ನಿಂದನೆ ಮಾಡಿರುವುದನ್ನು ಮೂರನೇ ವ್ಯಕ್ತಿ ಪ್ರತ್ಯಕ್ಷವಾಗಿ ಕಂಡಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಲ್ಲಿ ಕಲ್ಪನೆಗೆ ಬೆಲೆ ಇಲ್ಲ. ಜಾತಿನಿಂದನೆ ಪ್ರಕರಣದಲ್ಲಿ ನ್ಯಾಯಾಲಯವು ಕಾಯ್ದೆ ಹಾಗೂ ಜೀವನದ ವಾಸ್ತವತೆಯನ್ನು ಪರಿಶೀಲಿಸುತ್ತದೆ. ಆರೋಪವನ್ನು ಮೇಲ್ನೋಟಕ್ಕೆ ಸಾಬೀತು ಮಾಡುವ ಅಂಶಗಳು ಕಾಣುತ್ತಿಲ್ಲ. ಇಂತಹ ಸಂದರ್ಭದಲ್ಲಿ ಪ್ರಕರಣದ ತನಿಖೆ ಪೂರ್ಣಗೊಂಡಿಲ್ಲ ಎಂಬ ಒಂದೇ ಕಾರಣದಿಂದ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲು ನಿರಾಕರಿಸುವುದು ಸಾಧ್ಯವಿಲ್ಲ ಎಂದು ಪೀಠ ಅಭಿಪ್ರಾಯಪಟ್ಟು ಅರ್ಜಿದಾರರಿಗೆ ಷರತ್ತು ಬದ್ದ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಷರತ್ತುಗಳಲ್ಲಿ ಅರ್ಜಿದಾರರು ತಲಾ 50 ಸಾವಿರ ರೂ. ಬಾಂಡ್. ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ, ತನಿಖೆಗೆ ಸಹಕರಿಸುವುದು, ಸಾಕ್ಷ್ಯ ನಾಶಪಡಿಸುವಂತಿಲ್ಲ, ಸಮಾಜದ ಶಾಂತಿ ಕದಡಬಾರದು. ಷರತ್ತು ಉಲ್ಲಂಘಿಸಿದರೆ ಜಾಮೀನು ರದ್ದು ಕೋರಿ ಕೋರ್ಟ್ ಗೆ ಅರ್ಜಿ ಸಲ್ಲಿಸಬಹದು ಎಂದು ಸೂಚಿಸಿದೆ.
ಪ್ರಕರಣದ ಹಿನ್ನೆಲೆ:
ಭೋವಿ ಜಾತಿಗೆ ಸೇರಿದ ವಿ. ವೆಂಕಟೇಶಪ್ಪ ಎಂಬುವರು ಸಲ್ಲಿಸಿದ್ದ ದೂರು ಆಧರಿಸಿ ಕೋಲಾರದ ಶ್ರೀನಿವಾಸಪುರ ಠಾಣೆ ಪೊಲೀಸರು ಅರ್ಜಿದಾರರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323, 506ರಡಿ ಹಲ್ಲೆ, ಬೆದರಿಕೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ತಡೆ ಕಾಯ್ದೆ-1989ರ ಸೆಕ್ಷನ್ 3(1)(ಆರ್)(ಎಸ್) ಅಡಿ ಸಾರ್ವಜನಿಕವಾಗಿ ಜಾತಿ ನಿಂದನೆ ಮಾಡಿದ ಆರೋಪದಡಿ ಎಫ್ಐಆರ್ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಬಂಧನ ಭೀತಿಗೊಳಗಾಗಿದ್ದ ಅರ್ಜಿದಾರರು ಹೈಕೋರ್ಟ್ ಗೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ವೇಳೆ ಅಭಿಯೋಜನೆ ಪರ ವಕೀಲರು ವಾದಿಸಿ, ಜಾತಿ ನಿಂದನೆ ಪ್ರಕರಣದಲ್ಲಿ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡುವುದನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಿಂದ ಹೊರಗಿಡಲಾಗಿದೆ. ಅಪರಾಧ ಕೃತ್ಯವು ಗಂಭೀರ ಸ್ವರೂಪದ್ದು. ಮುಖ್ಯವಾಗಿ ಪ್ರಕರಣದ ತನಿಖೆ ಇನ್ನೂ ಪೂರ್ಣವಾಗಿಲ್ಲ. ಆದ್ದರಿಂದ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಾರದು ಎಂದು ಕೋರಿದ್ದರು.