ಬೆಂಗಳೂರು: 'ಈ ಚುನಾವಣೆ ಧರ್ಮ ಯುದ್ಧ. ಮತದಾರ ಈ ಕ್ಷೇತ್ರವನ್ನು ನೀಚ ರಾಜಕಾರಣಿಯ ನಿಯಂತ್ರಣದಿಂದ ಮುಕ್ತಗೊಳಿಸಬೇಕು' ಎಂದು ಆರ್ಆರ್ನಗರದ ಮತದಾರರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿನಂತಿಸಿಕೊಂಡಿದ್ದಾರೆ.
ರಾಜರಾಜೇಶ್ವರಿ ವಿಧಾನಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದ ಜಾಲಹಳ್ಳಿ ವಾರ್ಡ್‌ನಲ್ಲಿ ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕುಸುಮಾ ಪರ ಬೃಹತ್ ರೋಡ್ ಶೋ ನಡೆಸಿದರು.
ಈ ವೇಳೆ ಮಾತನಾಡಿದ ಡಿ ಕೆ ಶಿವಕುಮಾರ್, 'ಈ ಕ್ಷೇತ್ರದಲ್ಲಿ ಆಗಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಲು, ನಿಮ್ಮ ಕಷ್ಟಕ್ಕೆ ಧ್ವನಿಯಾಗಲು, ಕಾಂಗ್ರೆಸ್ ಪಕ್ಷದಿಂದ ಯುವ, ವಿದ್ಯಾವಂತ ಹಾಗೂ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ. ಇಂದು ನಾನು, ನಮ್ಮ ವಿರೋಧ ಪಕ್ಷದ ನಾಯಕರು, ಶಾಸಕರು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ಪರ ಪ್ರಚಾರಕ್ಕೆ ಇಲ್ಲಿಗೆ ಬಂದಿದ್ದೇವೆ. ಈ ಚುನಾವಣೆ ರಾಜಕಾರಣದ ಧರ್ಮ ಹಾಗೂ ಅಧರ್ಮದ ನಡುವಣ ಯುದ್ಧ.
ಒಂದು ಪಕ್ಷದಲ್ಲಿ ಗೆದ್ದು, ಆ ಪಕ್ಷ ಹಾಗೂ ಮತದಾರರನ್ನು ಕೇಳದೇ ಅವರು ಕೊಟ್ಟ ಮತ ಹಾಗೂ ಸ್ಥಾನವನ್ನು ಮಾರಿಕೊಂಡಿರುವುದು ರಾಜಕಾರಣದ ಅಧರ್ಮ. ಒಂದು ವ್ಯಕ್ತಿಯ ಸ್ವಾರ್ಥಕ್ಕಾಗಿ ಇಂದು ಈ ಚುನಾವಣೆಯ ನಡೆಯುತ್ತಿದೆ.ಈ ಚುನಾವಣೆಯಲ್ಲಿ ಏನೆಲ್ಲಾ ನಡೆಯುತ್ತಿದೆ ಎಂದು ನೀವು ಗಮನಿಸುತ್ತಿದ್ದೀರಿ. ಈ ಹಿಂದೆ ನಾನು ಸೇರಿದಂತೆ ಕೆಲವು ತಪ್ಪಿಗೆ ಕಾರಣಕರ್ತನಾಗಿದ್ದೇವೆ ಎಂದರು.
ಸುಳ್ಳು ಪ್ರಕರಣಗಳ ವಿರುದ್ಧ ಹೋರಾಟ: ನಿನ್ನೆ ಸಂಜೆ ಜ್ಞಾನಭಾರತಿ ಪಕ್ಕ ಕಾರ್ಪೊರೇಟರ್ ಮೋಹನ್ ಕುಮಾರ್ ಅವರ ಪ್ರದೇಶಕ್ಕೆ ಹೋಗಿದ್ದೆ. ಅಲ್ಲಿ ಎಲೆಕ್ಟ್ರಿಸಿಟಿ ಕಂಟ್ರಾಕ್ಟರ್ ಅವರ ಪುತ್ರ ಪ್ರೇಮ್ ಕುಮಾರ್ ಎಂಬ 21 ವರ್ಷದ ಹುಡುಗ ತನ್ನ ಸ್ನೇಹಿತರ ಜತೆ ತುಳಸಿ ಮುನಿರಾಜು ಅವರ ಫೋಟೋ ಹಾಕಿಕೊಂಡು ಟೂರ್ನಿ ಆಯೋಜನೆ ಮಾಡಿದ್ದಕ್ಕೆ ಅವರ ಮೇಲೆ ಕೇಸು ಹಾಕಿದ್ದಾರಂತೆ. ತನ್ನ ಮಗ ಕ್ರಿಕೆಟ್ ಟೂರ್ನಿ ಆಯೋಜಿಸಿದ್ದಕ್ಕೆ ಈ ಶಿಕ್ಷೆನಾ ಅಂತಾ ಅವರ ತಂದೆ ಕೊರಗುತ್ತಿದ್ದಾರೆ ಎಂದು ತಿಳಿಸಿದರು.
ನಾವು ಮುಂದಿನ ದಿನಗಳಲ್ಲಿ ನಮ್ಮ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ವಿಧಾನಸಭೆಯಲ್ಲಿ ಈ ಕ್ಷೇತ್ರದಲ್ಲಿ ದ್ವೇಷದಿಂದ ಹಾಕಲಾಗಿರುವ ಕೇಸ್‌ಗಳ ಕುರಿತು ಸಮಗ್ರ ತನಿಖೆಗೆ ಆಗ್ರಹಿಸುತ್ತೇವೆ. ಹೆಣ್ಣು ಮಕ್ಕಳು, ವಿದ್ಯಾರ್ಥಿಗಳು, ಯುವಕರು, ಎಲ್ಲ ಪಕ್ಷಗಳ ಕಾರ್ಯಕರ್ತರ ಮೇಲೆ ಹಾಕಿರುವ ಕೇಸುಗಳ ವಿರುದ್ಧ ಹೋರಾಟ ಮಾಡುತ್ತೇವೆ ಎಂದರು.
ಈ ವ್ಯಕ್ತಿ ಮೂವರು ಮಹಿಳಾ ಕಾರ್ಯಕರ್ತರ ಮೇಲೆ ಮಾತ್ರ ಈ ರೀತಿ ಕಿರುಕುಳ ನೀಡಿದ್ದಾನೆ ಎಂದುಕೊಂಡಿದ್ದೆ. ಆದರೆ, ಬೀದಿಬೀದಿಯಲ್ಲಿ ಇಂತಹ ಕೇಸುಗಳು ದಾಖಲಾಗಿವೆ. ತನ್ನ ವಿರುದ್ಧ ಧ್ವನಿ ಎತ್ತಿದ ಮಹಿಳೆಯರ ಮೇಲೆ ವೇಶ್ಯಾವಾಟಿಕೆ ಕೇಸು ದಾಖಲಾಗಿವೆ. ಈ ಚುನಾವಣೆ ನಂತರ ನಾವು ಇವರ ವಿರುದ್ಧ ಹೋರಾಟ ಮಾಡುತ್ತೇವೆ.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ವಿಚಾರವಾಗಿ ತನಿಖೆ ನಡೆಸಲು ಒಂದು ಪ್ರತ್ಯೇಕ ಆಯೋಗವನ್ನೇ ರಚಿಸುತ್ತೇವೆ. ಇನ್ನು ಮುಂದೆ ಈ ಕ್ಷೇತ್ರದ ಮುಗ್ಧ ಮತದಾರರಿಗೆ ರಕ್ಷಣೆ ನೀಡಲಿಲ್ಲ ಎಂದರೆ ನಾವು ನಮ್ಮ ಕರ್ತವ್ಯಕ್ಕೆ ದ್ರೋಹ ಬಗೆದಂತಾಗುತ್ತದೆ ಎಂದು ಕ್ಷೇತ್ರದ ಜನರಿಗೆ ತಿಳಿಸಿದರು.
ಈ ಚುನಾವಣೆ ಬಿಜೆಪಿಗೂ ನಮಗೂ ಅಲ್ಲ, ದಳಕ್ಕೂ ನಮಗೂ ಅಲ್ಲ. ಇದು ಒಬ್ಬ ವ್ಯಕ್ತಿ ಮಾಡಿರುವ ಅನಾಚಾರ, ಅನ್ಯಾಯ, ದಬ್ಬಾಳಿಕೆ, ಅಧಿಕಾರ ದುರುಪಯೋಗ ಮಾಡಿಕೊಂಡಿರುವುದಕ್ಕೆ ಶಿಕ್ಷೆ ನೀಡುವ ಚುನಾವಣೆ ಎಂದರು.
ಅರ್ಹ ಅಭ್ಯರ್ಥಿ ಕುಸುಮಾಗೆ ಮತ ನೀಡಿ: 'ಈ ನೀಚ ರಾಜಕಾರಣಿ ನಮ್ಮ ಪಕ್ಷದಿಂದ ತೊಲಗಿ ಹೋಗಿದ್ದೇ ಒಳ್ಳೆಯದಾಯ್ತು. ಇಂತವರನ್ನು ಬೆಳೆಸಿ, ನಾವು ರಾಜಕಾರಣ ಮಾಡುವ ಅಗತ್ಯವಿಲ್ಲ. ನೀವು ಈ ಬಾರಿ ಮತ ಹಾಕುವಾಗ ಒಬ್ಬ ಹೆಣ್ಣುಮಗಳು, ವಿದ್ಯಾವಂತೆ, ಬುದ್ಧಿವಂತೆ, ಪ್ರಜ್ಞಾವಂತೆ ಎಂದು ಆಯ್ಕೆ ಮಾಡಿದರೆ ನಿಮ್ಮ ಕಷ್ಟಕ್ಕೆ ಸ್ಪಂದಿಸುತ್ತಾಳೆ ಎಂಬುದನ್ನು ಯೋಚಿಸಿ ಮತಹಾಕಿ.
ಯುವಕರು, ಮಹಿಳೆಗೆ ಆದ್ಯತೆ ನೀಡಬೇಕು ಅಂತಾ ನಾವು ಕುಸುಮಾ ಅವರನ್ನು ಕಣಕ್ಕಿಳಿಸಿದ್ದೇವೆ. ಬೆಂಗಳೂರಿನ 28 ಕ್ಷೇತ್ರಗಳಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಆದ್ಯತೆ ನೀಡಿದ್ದೇವೆ. ಈ ಚುನಾವಣೆಯಲ್ಲಿ ನಿಮ್ಮ ಮುಂದೆ ಉತ್ತಮ ಅಭ್ಯರ್ಥಿಯನ್ನು ನಿಲ್ಲಿಸಿದ್ದೇವೆ.
ನೀವು ಪಕ್ಷವನ್ನು ನೋಡಬೇಡಿ. ನೀಚ ರಾಜಕಾರಣಿಯನ್ನು ಕ್ಷೇತ್ರದಲ್ಲಿ ಕೊನೆ ಮಾಡಬೇಕು, ಈ ಕ್ಷೇತ್ರಕ್ಕೆ ಸ್ವಾತಂತ್ರ್ಯ ಕೊಡಿಸಬೇಕು, ನಿಮಗೆ ಆಗಿರುವ ಅನ್ಯಾಯಕ್ಕೆ ಧ್ವನಿಯಾಗಲು ಕುಸುಮಾ ಅವರಿಗೆ ಮತ ನೀಡಿ ಎಂದು ಮನವಿ ಮಾಡಿದರು.