ಬೆಂಗಳೂರು: ಹೆಂಡತಿಗೆ ವಿಚ್ಛೇದನ ನೀಡಲು ಅಡ್ಡಿಪಡಿಸಿದ ಮಗಳನ್ನೇ ತಂದೆಯೇ ಸಹಚರರ ಮೂಲಕ ಸುಪಾರಿ ನೀಡಿದ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಪುಲಕೇಶಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಂಕರಪುರ ನಿವಾಸಿಯಾಗಿರುವ ರಿಯಾ ಆರ್. ಸಂಚೇತಿ ಎಂಬುವರು ತಂದೆ ರವಿ ಸಂಜೇತಿ ವಿರುದ್ಧ ದೂರು ನೀಡಿದ್ದಾರೆ. ಇದೇ ತಿಂಗಳು 24ರಂದು ರಿಯಾ ತನ್ನ ಸ್ನೇಹಿತರೊಂದಿಗೆ ಬಸವನಗುಡಿಯಿಂದ ಹೆಣ್ಣೂರು ಮಾರ್ಗವಾಗಿ ಕಾರಿನಲ್ಲಿ ಪಾಟರಿ ರೋಡ್ ತಲುಪುತ್ತಿದ್ದಂತೆ ಅಪರಿಚಿತ ವ್ಯಕ್ತಿಯೊಬ್ಬ ಆಕೆಯ ಕಾರ್ ಬಳಿ ಬಂದಿದ್ದಾನೆ. ಈತನನ್ನು ಕಂಡು ಯುವತಿ ಕಾರ್ ಗ್ಲಾಸ್ ಇಳಿಸಿದ್ದಾಳೆ. ಹತ್ತಿರ ಬಂದು ಏಕಾಏಕಿ ಕೂದಲು ಹಿಡಿದು ಎಳೆದಾಡಿ, ನೋಡ ನೋಡುತ್ತಿದ್ದಂತೆ ಕಾರಿನ ಗಾಜಿಗೆ ಕಲ್ಲಿನಿಂದ ಹೊಡೆದು ಹಾನಿಗೊಳಿಸಿದ್ದಾನೆ. ಘಟನೆ ಬಳಿಕ ಆತ ಅಲ್ಲಿಂದ ಓಡಿ ಹೋಗಲು ಯತ್ನಿಸಿದಾಗ ಸ್ಥಳೀಯರು ಆತನನ್ನು ಹಿಡಿದುಕೊಂಡಿದ್ದಾರೆ. ಹಲ್ಲೆ ಬಗ್ಗೆ ಪ್ರಶ್ನಿಸಿದಾಗ ನನ್ನನ್ನೂ ಏನೂ ಕೇಳಬೇಡಿ, ನಿಮ್ಮ ತಂದೆಯನ್ನು ಕೇಳಿ ಎಂದಿದ್ದಾನೆ. ಅವರೇ ನನಗೆ ಹೀಗೆ ಮಾಡಲು ತಿಳಿಸಿರುವುದಾಗಿ ಹೇಳಿದ್ದಾನೆ ಎನ್ನಲಾಗಿದೆ.
ತಂದೆಯಿಂದ ದೂರವಿದ್ದ ಅಮ್ಮ-ಮಗಳು
ಹಲ್ಲೆಗೊಳಗಾದ ರಿಯಾ ತಾಯಿ ಆಶಾ ಹಾಗೂ ತಂದೆ ರವಿ ಸಂಚೇತಿ 23 ವರ್ಷಗಳ ಹಿಂದೆ ಮದುವೆಯಾಗಿದ್ದರು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಇವರ ನಡುವೆ ವೈರತ್ವ ಮೂಡಿ ದೂರವಾಗಿದ್ದರು. ಇದಾದ ಬಳಿಕ ರವಿ ಅಕ್ರಮವಾಗಿ ಮತ್ತೊಂದು ಮದುವೆಯಾಗಿದ್ದರಂತೆ. ಈ ನಡುವೆ ಹೆಂಡತಿಗೆ ವಿಚ್ಛೇದನ ನೀಡಲು ಮುಂದಾಗಿದ್ದ. ಆದರೆ ತಂದೆ ಬೇರೆ ಮಹಿಳೆ ಜೊತೆ ಮದುವೆಯಾಗಿದೆ ಎಂದು ಹೇಳಿ ಕೋರ್ಟ್ನಲ್ಲಿ ವಿಚ್ಛೇದನ ಅರ್ಜಿ ತಿರಸ್ಕೃತವಾಗುವಂತೆ ನೋಡಿಕೊಂಡಿದ್ದಳು ಎನ್ನಲಾಗಿದೆ.
ಇದೇ ಕೋಪದ ಮೇಲೆ ತಾಯಿ ಆಶಾ ಹಾಗೂ ನನ್ನ ಮೇಲೆ ಅಟ್ಯಾಕ್ ಮಾಡಿಸಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ. ಹಲ್ಲೆ ಮಾಡಿದ ವ್ಯಕ್ತಿಯನ್ನು ವಿಚಾರಣೆ ನಡೆಸಿದಾಗ ಆತ ಕೆಜಿಎಫ್ ಮೂಲದವನಾಗಿದ್ದು, ಮೇಲ್ನೋಟಕ್ಕೆ ಆತ ಮಾನಸಿಕ ಅಸ್ವಸ್ಥನಂತೆ ಕಂಡು ಬಂದಿದ್ದಾನೆ. ಈ ಹಿಂದೆ ಇದೇ ರೀತಿಯ ವರ್ತನೆ ತೋರಿಸಿದ್ದರಂತೆ. ಇನ್ನು ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.