ಬೆಂಗಳೂರು: ದೇಶಕ್ಕೆ ಇಂದು ದೊಡ್ಡ ಗಂಡಾಂತರ ಎದುರಾಗಿದೆ, ಕಾಂಗ್ರೆಸ್ ನಿರ್ದಿಷ್ಟ ಕಾರ್ಯಕ್ರಮ ಹಾಕಿಕೊಳ್ಳಬೇಕು, ಜತೆಗೆ ಪ್ರದೇಶಿಕ ಪಕ್ಷಗಳನ್ನು ಬಲಪಡಿಸಬೇಕೆಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಕರೆಕೊಟ್ಟಿದ್ದಾರೆ.
ಪಕ್ಷಕ್ಕೆ ಹೊಸ ಚೈತನ್ಯ ತುಂಬುವ ಉದ್ದೇಶದಿಂದ ನಗರದ ಅರಮನೆ ಮೈದಾನದಲ್ಲಿ ಇಂದು ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡಿದ ಗೌಡರು, ನಾವು ಎಲ್ಲೋ ಎಡವಿದ್ದೇವೆ. ಹಾಗಾಗಿ, ಪಕ್ಷಕ್ಕೆ ಹಿನ್ನಡೆ ಉಂಟಾಗಿದೆ. ಇದನ್ನು ಸವಾಲಾಗಿ ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದರು.
ಉಪ ಚನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಸೋತಿದ್ದೇವೆ. ಕಾಂಗ್ರೆಸ್ ಎರಡು ಕಡೆ ಮಾತ್ರ ಗೆದ್ದಿದೆ. ಜೆಡಿಎಸ್ ಪಕ್ಷವೇ ಮುಳುಗಿಹೋಯಿತೆಂದು ಭಾವಿಸಬೇಡಿ ದೇವೇಗೌಡರು ಸೋತಿದ್ದಾರೆ. ಆದರೆ, ಪಕ್ಷವನ್ನು ಕಟ್ಟುವ ಕೆಲಸ ಕಾರ್ಯಕರ್ತರು ಮಾಡಬೇಕು ಎಂದ ಅವರು, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲಮನ್ನಾ ಮಾಡಿದರು. ದುರಂತ ಅಂದರೆ ಉಪಚುನಾವಣೆಯಲ್ಲಿ ಯಾರೂ ಇದನ್ನು ಮನಸ್ಸಿಗೆ ತೆಗೆದುಕೊಂಡಿಲ್ಲ. ಬೆಳಗಾವಿಯಲ್ಲಿ ಒಳ್ಳೆಯ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಿದ್ದೆವು. ಸೋಲು ಯಾಕಾಯ್ತು ಅಂತ ನಾನು ಅರಿತುಕೊಂಡಿದ್ದೇನೆ ಎಂದು ಹೇಳಿದರು.
ಕೊನೆಯುಸಿರಿರುವವರೆಗೂ ಪಕ್ಷ ಸಂಘಟನೆ: ತಮಿಳುನಾಡಿನಲ್ಲಿ ಕರುಣಾನಿಧಿ ಅವರು 96 ನೇ ವಯಸ್ಸಿನಲ್ಲೂ ವ್ಹೀಲ್ ಚೇರ್ ನಲ್ಲಿ ಹೋಗಿ ಪಕ್ಷ ಸಂಘಟನೆ ಮಾಡುತ್ತಿದ್ದರು. ಅದೇ ರೀತಿ ನಾನು ನನ್ನ ಉಸಿರಿರುವ ತನಕ ರಾಜ್ಯದ ಜನತೆಗೋಸ್ಕರ ಹೋರಾಟ ಮಾಡುತ್ತೇನೆ. ನನಗೆ ಅಧಿಕಾರಕ್ಕಿಂತ ರಾಜ್ಯದ ನೆಲ, ಜಲ ಭಾಷೆ ಅತಿ ಮುಖ್ಯ. ಇದಕ್ಕೊಸ್ಕರ ನನ್ನ ಉಸಿರು ಮುಡಿಪಾಗಿಡುತ್ತೇನೆ. ಜೊತೆಗೆ ಈ ಪಕ್ಷ ಸೂರ್ಯ - ಚಂದ್ರರಿರುವ ತನಕ ಇರಬೇಕು. ಅದಕ್ಕೆಲ್ಲ ನಿಮ್ಮ ಸಹಕಾರ ಮತ್ತು ಪಕ್ಷದ ಉಳುವಿಗಾಗಿ ನಿಮ್ಮ ಹೋರಾಟ ಅತ್ಯವಶ್ಯಕ ಎಂದರು.
ಸಿಎಎ ಬಗ್ಗೆ ಮಾತನಾಟಡಿದ ದೆಹಲಿಯ ಜಂತರ್ ಮಂತರ್ ನಲ್ಲೂ ಹೋರಾಟ ಮಾಡುವ ಧೈರ್ಯ ನಿಮ್ಮಲ್ಲಿ ಬರಬೇಕು. ನಾನೊಬ್ಬನೇ ಹೋಗಿ ಕೂಗಿದರೆ ಏನು ಪ್ರಯೋಜನ. ದೇಶಕ್ಕೆ ಬಂದಿರುವ ಅತಿದೊಡ್ಡ ಗಂಡಾಂತರ ಸಿಎಎ, ಎನ್ ಸಿ ಆರ್, ಎನ್ ಪಿಆರ್ ಈ ಮೂರು ಕಾಯ್ದೆಗಳು. ಇದರ ವಿರುದ್ಧ ಹೋರಾಡಬೇಕು. ನಮ್ಮನ್ನು ಜೈಲಿಗೆ ಹಾಕಿದರೂ ಹೋಗುವುದಕ್ಕೆ ಸಿದ್ಧರಾಗಿರಬೇಕು. ಯಾವ ಹಂತದ ಹೋರಾಟಕ್ಕೂ ಸಿದ್ಧರಿರಬೇಕು. ನಾವೆಲ್ಲ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ನಿರ್ಧಾರಗಳ ವಿರುದ್ಧ ಹೋರಾಟ ಮಾಡಬೇಕು ಕಾರ್ಯಕರ್ತರಲ್ಲಿ ಚೈತನ್ಯ ತುಂಬಿದರು.