ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿಗೀಡಾಗುತ್ತಿರುವವರ ಪ್ರಮಾಣ ಇಳಿಕೆಯಾಗುತ್ತಿದ್ದು, ಸದ್ಯ ಶೇ.5 ಕ್ಕಿಂತಲೂ ಕಡಿಮೆ ಇದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಶನಿವಾರದಂದು 47 ಸಾವಿರ ಜನರ ಸೋಂಕು ಪರೀಕ್ಷೆ ಮಾಡಲಾಗಿದೆ. ಇದೇ ರೀತಿ ಹೊರವಲಯಗಳಲ್ಲೂ ಸೋಂಕು ಪರೀಕ್ಷೆ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗುತ್ತದೆ. ತಜ್ಞರ ಸಮಿತಿ ಸಭೆಯಲ್ಲಿ ಮಾಸ್ಕ್ ಧಾರಣೆಯ ಗೊಂದಲಕ್ಕೆ ಪರಿಹಾರ ಸಿಗಲಿದೆ. ಕೋವಿಡ್ ಮರಣ ಪ್ರಮಾಣ ಇಳಿಕೆಯಾಗದಿರಲು ಕಾರಣ, ಜನ ತಡವಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವುದು ಎಂದು ಅವರು ಹೇಳಿದ್ದಾರೆ.
ವಾರ್ಡ್ ಸಮಿತಿ ಸಭೆ ಕಡ್ಡಾಯ:
ವಾರ್ಡ್ ಸಮಸ್ಯೆಗಳನ್ನು ಬಗೆಹರಿಸಲು ಸಮಿತಿ ಸಭೆ ತುಂಬಾ ಸಹಕಾರಿಯಾಗಿದ್ದು, ಪ್ರತೀ ತಿಂಗಳ ಮೊದಲ ಶನಿವಾರ ವಾರ್ಡ್ ಸಮಿತಿ ಸಭೆ ನಡೆಸಬೇಕೆಂದು ಆದೇಶ ಮಾಡಲಾಗಿದೆ. ಅಲ್ಲದೆ ವಾರ್ಡ್ ಗಳಲ್ಲಿರುವ ಮಾಜಿ ಕಾರ್ಪೊರೇಟರ್ ಗಳ ಹೆಸರು, ಭಾವಚಿತ್ರವನ್ನು ತೆಗೆಯಲು ಕ್ರಮ ಕೈಗೊಳ್ಳಲಾಗುವುದು ಎಂದರು.
ರಸ್ತೆಗುಂಡಿ ಮುಚ್ಚಲು 15 ದಿನದ ಗಡುವು:
ರಸ್ತೆಗುಂಡಿ ಮುಚ್ಚಲು 31 ತಂಡಗಳನ್ನು ನಿಯೋಜಿಸಿದ್ದು, ಪ್ರತೀ ತಂಡದಲ್ಲಿ 25 ಜನ ಕಾರ್ಮಿಕರಿದ್ದಾರೆ. 15 ದಿನದೊಳಗೆ ರಸ್ತೆಗುಂಡಿ ಮುಚ್ಚಲು ಗಡುವು ನೀಡಲಾಗಿದ್ದು, ಸಿಎಂ ಕೂಡಾ ಮಾತನಾಡಿ, ತ್ವರಿತಗತಿಯಲ್ಲಿ ಕೆಲಸವಾಗಬೇಕು ಎಂದಿದ್ದಾರೆ.