ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಇತಿಹಾಸ ಇದೆ, ಈ ರೀತಿಯ ಐಟಿ ದಾಳಿ ಪ್ರಜಾಪ್ರಭುತ್ವದ ಕಗ್ಗೊಲೆ, ಇದರ ವಿರುದ್ಧ ಪಕ್ಷ ಹೋರಾಟ ಮಾಡುತ್ತದೆ ಎಂದು ಮಾಜಿ ಕೇಂದ್ರ ಸಚಿವ ಕೆ. ಎಚ್. ಮುನಿಯಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಸದಾಶಿವನಗರದ ಪರಮೇಶ್ವರ್ ನಿವಾಸದ ಬಳಿ ಬಂದ ಮಾಜಿ ಕೇಂದ್ರ ಸಚಿವ ಕೆ. ಎಚ್. ಮುನಿಯಪ್ಪ ಹಾಗೂ ವಿಧಾನಪರಿಷತ್ ಸದಸ್ಯ ವೇಣುಗೋಪಾಲ್ ಆದಾಯ ತೆರಿಗೆ ದಾಳಿಯ ವಿರುದ್ಧ ಗರಂ ಆದರು.
ಈ ಸಂದರ್ಭದಲ್ಲಿ ಮಾತನಾಡಿದ ಮುನಿಯಪ್ಪ, ದೇಶ ಸಂಕಷ್ಟದಲ್ಲಿದೆ, ಜಿಎಸ್ಟಿ ಜಾರಿಯಿಂದ ಕೈಗಾರಿಕೆಗಳು ಮುಚ್ಚುತ್ತಿವೆ ಹಾಗೂ ಲಕ್ಷಾಂತರ ಮಂದಿ ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಜನರ ಭಾವನೆಯನ್ನು ಬೇರೆಡೆ ಸೆಳೆಯಲು ಈ ರೀತಿಯ ರೈಡ್ ಮಾಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರವನ್ನು ದೂಷಿಸಿದರು.
ವಿಧಾನಪರಿಷತ್ ಸದಸ್ಯ ವೇಣುಗೋಪಾಲ್, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶಗೊಂಡು ಪರಮೇಶ್ವರ್ ಹಿಂದೆ ಗೃಹ ಹಾಗೂ ಉಪಮುಖ್ಯಮಂತ್ರಿ ಆಗಿದ್ದವರು. ಇಂತಹ ದೊಡ್ಡ ನಾಯಕನನ್ನು ಕೈದಿ ರೀತಿ ನಡೆಸಿಕೊಳ್ಳುವುದು ಸರಿಯಿಲ್ಲ. ಕಲಾಪಕ್ಕೆ ಹೋಗಲು ಅವಕಾಶ ನೀಡದಿರುವುದು ಸಮಂಜಸವಲ್ಲ ಎಂದು ತಿಳಿಸಿದರು.