ಬೆಂಗಳೂರು: ರಾಷ್ಟ್ರ ಮಟ್ಟದಲ್ಲಿ ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದ್ದ ದಲಿತ ಯುವಕನಿಗೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮೂತ್ರ ಕುಡಿಸಿದ ಆರೋಪ ಪ್ರಕರಣದ ಪಾರದರ್ಶಕ ತನಿಖೆಗೆ ಆಗ್ರಹಿಸಿ ರಾಜ್ಯಸಭಾ ಸದಸ್ಯ ಡಾ. ಎಲ್.ಹನುಮಂತಯ್ಯ ನೇತೃತ್ವದ ನಿಯೋಗ ರಾಜ್ಯ ಪೋಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಗೆ ದೂರು ನೀಡಿದೆ.
ನೃಪತುಂಗ ರಸ್ತೆಯಲ್ಲಿರುವ ಡಿಜಿ ಹಾಗೂ ಐಜಿ ಕಚೇರಿಗೆ ತೆರಳಿದ ನಿಯೋಗ ಅಮಾನುಷ ಘಟನೆಗೆ ಕಾರಣರಾದ ಗೋಣಿಬೀಡು ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅರ್ಜುನ್ ಬಂಧಿಸಿ ಸೇವೆಯಿಂದ ವಜಾ ಮಾಡಬೇಕೆಂದು ಆಗ್ರಹಿಸಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಹನುಮಂತಯ್ಯ, ದಲಿತ ಯುವಕನ ಮೇಲೆ ನಡೆದ ಘಟನೆ ಅಮಾನವೀಯ. ದಲಿತ ಎಂಬ ಕಾರಣಕ್ಕಾಗಿ ಠಾಣೆಗೆ ಕರೆತಂದು ಚಿತ್ರಹಿಂಸೆ ನೀಡಿ ಬಾಯಾರಿಕೆ ಎಂದು ನೀರು ಕೇಳಿದಾಗ ಮೂತ್ರ ಕುಡಿಸಿರುವ ವಿಚಾರ ಒಪ್ಪಲು ಸಾಧ್ಯವಿಲ್ಲ. ಸರ್ಕಾರಿ ಅಧಿಕಾರಿಯಾಗಿ ಇಂತಹ ಕೃತ್ಯ ಎಸಗಿರುವುದು ನಾಚಿಗ್ಗೇಡಿನ ಸಂಗತಿಯಾಗಿದೆ ಅಕ್ರೋಶ ವ್ಯಕ್ತಪಡಿಸಿದರು.
ಘಟನೆ ನಡೆದು 10 ದಿನಗಳ ಕಾಲ ಸ್ಥಳೀಯ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣ ಹಾಗೂ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾದರೂ ಕ್ರಮ ಕೈಗೊಳ್ಳದ ಚಿಕ್ಕಮಗಳೂರು ಜಿಲ್ಲೆಯ ಎಸ್ಪಿ ಅವರನ್ನು ಘಟನೆಯ ಹೊಣೆಗಾರರನ್ನಾಗಿಸಿ ಕೂಡಲೇ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರಕರಣ ಸಿಐಡಿಗೆ ಹಸ್ತಾಂತರವಾಗಿದ್ದು ಈ ಬಗ್ಗೆ ತನಿಖೆ ನಡೆಸುತ್ತಿದೆ. ಸಬ್ ಇನ್‌ಸ್ಪೆಕ್ಟರ್ ವಿರುದ್ಧ ಜಾತಿ ನಿಂದನೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸುವ ವಿಶ್ವಾಸವಿದೆ ಎಂದರು.
ಮತ್ತೊಂದೆಡೆ ಕೊರೊನಾ ತೊಲಗಿಸಲು ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಹೋಮ-ಹವನ ನಡೆಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಲ್ ಹನುಮಂತಯ್ಯ ಅವರು, ಹೋಮ ಮಾಡಿದರೆ ಕೊರೊನಾ ತೊಲಗಲಿದೆ ಎಂಬುದು ಅವೈಜ್ಞಾನಿಕ. ಬಿಜೆಪಿಯವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಇದನ್ನೇ ಮಾಡಿದ್ದಾರೆ. ಇದು ಜನರನ್ನು ದಾರಿ ತಪ್ಪಿಸುವ ಕೆಲಸವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಓದಿ: ಠಾಣೆಗೆ ಕರೆದು ದಲಿತ ಯುವಕನಿಗೆ ಮೂತ್ರ ಕುಡಿಸಿದ ಪಿಎಸ್ಐ; ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ