ಬೆಂಗಳೂರು: ಜೆಡಿಎಸ್ ಮುಗಿಸಬೇಕೆಂಬುದೇ ಕಾಂಗ್ರೆಸ್ ಅಜೆಂಡಾ. ಅದು ಆಕ್ರೋಶವೂ, ಹೆದರಿಕೆಯೋ ಗೊತ್ತಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಆರ್.ಆರ್. ನಗರ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಪರ ಪ್ರಚಾರ ಸಭೆ ನಡೆಸಿದ ವೇಳೆ ಮಾತನಾಡಿದ ಅವರು, ಸಾರ್ವಜನಿಕವಾಗಿ ಒಬ್ಬ ಮುಖ್ಯಮಂತ್ರಿ ದೇಶದಲ್ಲಿ ಕಣ್ಣೀರು ಹಾಕ್ತಾರೆ ಅಂದ್ರೆ ಅದು ನಾನು. ಅಂತಹ ವಾತಾವರಣದಲ್ಲಿ ನಾನಿದ್ದೆ. ಬಿಜೆಪಿಗಿಂತ ಜೆಡಿಎಸ್ ಮೇಲೆ ಕಾಂಗ್ರೆಸ್ ಸಿಟ್ಟು ಎಂದು ಕಿಡಿ ಕಾರಿದರು.
ಹಿಂದೆ ನಡೆದ ಮೂರು ಚುನಾವಣೆಯಲ್ಲಿ 38-60 ಸಾವಿರ ಮತವನ್ನು ಪಕ್ಷದ ಅಭ್ಯರ್ಥಿಗೆ ನೀಡಿದ್ದೀರಿ. ಅದಕ್ಕೆ ನಾನು ಋಣಿ. ಕುಮಾರಸ್ವಾಮಿ ಬಿಜೆಪಿ ಹಾಗೂ ಬಿಜೆಪಿ ಅಭ್ಯರ್ಥಿ ಬಗ್ಗೆ ಸಾಫ್ಟ್ ಕಾರ್ನರ್ ಇದ್ದಾರೆ ಅನ್ನೋ ಮಾತಿದೆ. ಅದು ತಪ್ಪು ಕಲ್ಪನೆ ಎಂದು ಸ್ಪಷ್ಟಪಡಿಸಿದರು.
ಲೂಟಿ ಹೊಡೆಯೋರ ಬಗ್ಗೆ ನಾನು ಮಾತಾಡಲ್ಲ. 250 ಕೋಟಿ ಕಳ್ಳ ಬಿಲ್ ಮಾಡಿ ಲೂಟಿ ಮಾಡಿದ್ದಾರೆ. ಇದನ್ನು ನಾನು ಮಾತಾಡಿದ್ದಲ್ಲ. ನಮ್ಮಪಕ್ಷದ ಮುಖಂಡರನ್ನು ಸೆಳೆಯೋ ಕೆಲಸ ಮಾಡ್ತಿದ್ದಾರಲ್ಲ, ಅವರೇ ಮಾಡಿದ ಆರೋಪ ಎಂದು ಡಿಕೆಶಿ ಹೆಸರು ಹೇಳದೇ ವಾಗ್ದಾಳಿ ನಡೆಸಿದರು.
ಇದು ಕೆಂಪೇಗೌಡ ಕಟ್ಟಿದ ನಗರವಾಗಿಲ್ಲ ಇವತ್ತು. ಉತ್ತರ ಭಾರತದಿಂದ ಬಂದು ಬೆಂಗಳೂರಲ್ಲಿ ಸೇರ್ಕೊಂಡಿದ್ದಾರೆ. ಅವರಿಗೆ ಬಿಜೆಪಿ, ಕಾಂಗ್ರೆಸ್ ಎರಡೇ ಪಕ್ಷ ಗೊತ್ತು ಎಂದು ವಿಷಾದ ವ್ಯಕ್ತಪಡಿಸಿದರು.
ಮೋದಿ ದಿನಕ್ಕೆ ಎಷ್ಟು ಡ್ರೆಸ್ ಬದಲಾಯಿಸ್ತಾರೆ. ಆ ಡ್ರೆಸ್ ಗೆ ಎಷ್ಟು ಲಕ್ಷವೋ ಗೊತ್ತಿಲ್ಲ. ದಿನಕ್ಕೆ ಮೂರು ನಾಲ್ಕು ಡ್ರೆಸ್ ಹಾಕ್ತಾರೆ ಹಾಗಾಗಿ ಚೆನ್ನಾಗಿ ಕಾಣ್ತಾರೆ. ದೇವೆಗೌಡರು ದಿನಾ ಬೆಳಗ್ಗೆಯಿಂದ ರಾತ್ರಿ ತನಕ ಒಂದೇ ಪಂಚೆ ಹಾಕಿರ್ತಾರೆ. ದೇವೆಗೌಡರ ಫ್ಯಾಮಿಲಿಯನ್ನು ದುಡ್ಡು ನೀಡಿ ಕೊಂಡುಕೊಳ್ಳಲು ಆಗಲ್ಲ ಎಂದು ಇದೇ ವೇಳೆ ತಿಳಿಸಿದರು.
ಮೋದಿ ಆರು ವರ್ಷದಲ್ಲಿ ದೇಶವನ್ನು ಏನು ಮಾಡಿದ್ದಾರೆ? ಚೀನಾ ವಿರುದ್ಧ ಸ್ಪರ್ಧೆ ಮಾಡುವುದು ಇರಲಿ, ಮೋದಿ ಬಾಂಗ್ಲಾದೇಶದ ಜೊತೆ ಸ್ಪರ್ಧೆ ಮಾಡಬೇಕಿದೆ. ಆ ರೀತಿ ಆಗಿದೆ ದೇಶ ಕಳೆದ ಆರು ವರ್ಷದಲ್ಲಿ ಎಂದು ವಾಗ್ದಾಳಿ ನಡೆಸಿದರು.