ಬೆಂಗಳೂರು : ಕೊರೊನಾ ನಿಯಂತ್ರಣ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ವಿಡಿಯೋ ಸಂವಾದ ಮುಗಿಯುತ್ತಿದ್ದಂತೆ ವಿಧಾನ ಪರಿಷತ್ ಅಭ್ಯರ್ಥಿಗಳ ಆಯ್ಕೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬ್ಯುಸಿಯಾಗಿದ್ದಾರೆ. ಕೊಟ್ಟ ಮಾತು ಉಳಿಸಿಕೊಳ್ಳುವ ಅನಿವಾರ್ಯತೆಗೆ ಸಿಲುಕಿರುವ ಸಿಎಂ, ಸಚಿವರು, ಶಾಸಕರ ಸಭೆ ಕರೆದು ಸಮಾಲೋಚನೆ ನಡೆಸಿದ್ದಾರೆ.
ನಾಳೆ ವಿಧಾನ ಪರಿಷತ್ ಚುನಾವಣೆಗೆ ನಾಮ ಪತ್ರ ಸಲ್ಲಿಸಲು ಕಡೆಯ ದಿನವಾಗಿದೆ. ಅಭ್ಯರ್ಥಿಗಳ ಪಟ್ಟಿ ಯಾವ ಕ್ಷಣದಲ್ಲಿ ಬೇಕಾದ್ರೂ ಪ್ರಕಟಗೊಳ್ಳುತ್ತದೆ. ಅತ್ತ ಪಕ್ಷದ ಕೇಂದ್ರ ಸಂಸದೀಯ ಮಂಡಳಿ ಅಭ್ಯರ್ಥಿಗಳ ಆಯ್ಕೆ ಕುರಿತು ಸಭೆ ನಡೆಸುತ್ತಿದ್ರೆ ಇತ್ತ ಮುಖ್ಯಮಂತ್ರಿ ಯಡಿಯೂರಪ್ಪ ಸಚಿವರು, ಶಾಸಕರ ಜೊತೆ ಸಭೆ ನಡೆಸಿದರು.
ಸಂಜೆ ಅಧಿಕೃತ ನಿವಾಸ ಕಾವೇರಿಯಲ್ಲಿ ನಡೆದ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಹೈಕಮಾಂಡ್ ನಡೆ ನಂತರದ ಬೆಳವಣಿಗೆಗಳ ಕುರಿತು ಸಮಾಲೋಚನೆ ನಡೆಸಿದರು. ಸದ್ಯದ ಮಾಹಿತಿ ಪ್ರಕಾರ ಸಿಎಂ ನಿರೀಕ್ಷಿತ ಹೆಸರುಗಳಲ್ಲಿ ಎಂಟಿಬಿ ಮತ್ತು ಆರ್.ಶಂಕರ್ ಹೆಸರು ಅಂತಿಮಗೊಳ್ಳುವ ಸಾಧ್ಯತೆ ಇದೆ. ಮತ್ತಿಬ್ಬರ ಆಯ್ಕೆ ರಾಜ್ಯಸಭೆ ಚುನಾವಣೆಯಂತೆ ಅಚ್ಚರಿ ಆಯ್ಕೆಯಾಗಲಿದೆ ಎನ್ನುವ ಸುಳಿವು ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪರಿಷತ್ ಟಿಕೆಟ್ ಪ್ರಕಟಕ್ಕೂ ಮುನ್ನ ಸಿಎಂ ಸಭೆ ನಡೆಸಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.