ಬೆಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯರ ಹೆಸರಲ್ಲಿ ನಕಲಿ ಖಾತೆ ತೆರೆದು, ವಂಚಿಸುತ್ತಿದ್ದ ಮೂವರನ್ನು ಸಿಐಡಿ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಹರಿಯಾಣದ ಮುಜಾಹಿದ್, ಇಕ್ಬಾಲ್ ಮತ್ತು ಆಸಿಫ್ ಬಂಧಿತರಾಗಿದ್ದು, ಉಳಿದವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಜಾಲತಾಣಗಳಲ್ಲಿ ಪುರುಷರನ್ನು ಪರಿಚಯ ಮಾಡಿಕೊಂಡು ಅವರ ಜತೆ ಸಲುಗೆಯಿಂದ ಮಾತಾಡಿ, ಅವರ ಬೆತ್ತಲೆ ವಿಡಿಯೋವನ್ನು ಸೆರೆಹಿಡಿದು ಈ ಗ್ಯಾಂಗ್ ಬ್ಲ್ಯಾಕ್ ಮೇಲ್ ಮಾಡುತ್ತಿತ್ತು ಎಂದು ತಿಳಿದುಬಂದಿದೆ.
ಸೈಬರ್ ಖದೀಮರು ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯರ ಸೋಗಿನಲ್ಲಿ ಪುರುಷರನ್ನು ಪರಿಚಯಿಸಿಕೊಂಡು, ಲೈಂಗಿಕ ಸಂಭಾಷಣೆಯಲ್ಲಿ ತೊಡಗುತ್ತಿದ್ದರು. ಬಳಿಕ ಅವರು ಬೆತ್ತಲೆಯಾಗುವಂತೆ ಪ್ರೇರೇಪಿಸುತ್ತಿದ್ದರಂತೆ. ಅವರಿಗೆ ತಿಳಿಯದಂತೆ ನಗ್ನಚಿತ್ರ ಮತ್ತು ವಿಡಿಯೋಗಳನ್ನು ಸ್ಕ್ರೀನ್ ರೆಕಾರ್ಡ್ ಮಾಡಿ, ಹಣಕ್ಕೆ ಬೇಡಿಕೆ ಇಡುತ್ತಿದ್ದರಂತೆ. ಹಣ ಕೊಡದಿದ್ದರೆ, ವಿಡಿಯೋವನ್ನು ಜಾಲತಾಣಗಳಿಗೆ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕತ್ತಿದ್ದರು ಎನ್ನಲಾಗ್ತಿದೆ.
ಜುಲೈ 22 ರಂದು ಸಿಐಡಿಯ ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.
5 ಸಾವಿರ ಸಿಮ್‌ಕಾರ್ಡ್
ಮುಜಾಹಿದ್, ಸಿಮ್ ಕಾರ್ಡ್ ವಿತರಕರಿಗೆ ನಕಲಿ ದಾಖಲೆ ಒದಗಿಸಿ ಸಿಮ್ ಕಾರ್ಡ್ ಪಾಯಿಂಟ್ ಆಫ್ ಸೇಲ್ ಏಜೆನ್ಸಿಯನ್ನು ಪಡೆದುಕೊಳ್ಳುತ್ತಿದ್ದ. ವಿತರಕರಿಂದ ಸಿಮ್ ಕಾರ್ಡ್‌ಗಳನ್ನು ಪಡೆದು ಆ್ಯಕ್ಟಿವೇಟ್ ಮಾಡುವ ಸಲುವಾಗಿ ಡೆಮೋ ಸಿಮ್ಗಳು ಮತ್ತು ಒಟಿಪಿಗಳನ್ನು ಪಡೆದುಕೊಳ್ತಿದ್ದ. ಈ ಹಿಂದೆ ಡಿಜಿಟಲ್ ವ್ಯಾಲೆಟ್ನೊಂದಿಗೆ ಸಂಪರ್ಕವಿದ್ದ ಮೊಬೈಲ್ ಸಂಖ್ಯೆಗಳನ್ನು ಪತ್ತೆ ಹಚ್ಚಿದ್ದಾನೆ. ನಕಲಿ ದಾಖಲಾತಿಗಳನ್ನಿಟ್ಟುಕೊಂಡು ತಂಡದ ಸದಸ್ಯರ ಮೂಲಕ ಕಳೆದ 10 ತಿಂಗಳಲ್ಲಿ 5 ಸಾವಿರಕ್ಕೂ ಹೆಚ್ಚು ಸಿಮ್ ಕಾರ್ಡ್ಗಳು ಮತ್ತು ಡಿಜಿಟಲ್ ವ್ಯಾಲೆಟ್‌ಗಳನ್ನು ಸಕ್ರಿಯಗೊಳಿಸಿದ್ದ ಎಂದು ಹೇಳಲಾಗ್ತಿದೆ.
ದೇಶಾದ್ಯಂತ 3,951 ಮಂದಿಗೆ ವಂಚನೆ
ಸಿಐಡಿ ಸೈಬರ್ ಅಪರಾಧ ವಿಭಾಗವು ಹಂಚಿಕೊಂಡ ಮಾಹಿತಿಯ ಆಧಾರದಲ್ಲಿ, ಕೇಂದ್ರ ಗೃಹ ಸಚಿವಾಲಯದ ಸೈಬರ್ ಸಹಕಾರ ಕೇಂದ್ರವು ಮಾಹಿತಿ ಪಡೆದಿತ್ತು. ಆರೋಪಿಗಳು ದೇಶಾದ್ಯಂತ 3,951 ಪ್ರಕರಣಗಳಲ್ಲಿ ಭಾಗಿಯಾಗಿರುವುದನ್ನು ಪತ್ತೆಯಾಗಿದೆ ಎಂದು ಅಪರಾಧ ಪತ್ತೆ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಮೊಬೈಲ್ ಮತ್ತು ಇ -ವ್ಯಾಲೆಟ್ ಸೇವೆಗಳ ಲೋಪದೋಷಗಳ ದುರ್ಬಳಕೆ
ಆರೋಪಿಗಳು ಮೊಬೈಲ್ ಸೇವಾದಾರರು ಮತ್ತು ಇ-ವ್ಯಾಲೆಟ್ ಸೇವಾದಾರರ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದರು. ಮೊಬೈಲ್ ಸಂಖ್ಯೆಯನ್ನು ಇ -ವ್ಯಾಲೆಟ್ ಅಪ್ಲಿಕೇಷನ್‌ನಲ್ಲಿ ನಮೂದಿಸುವ ಮೂಲಕ ಮೊಬೈಲ್ನಲ್ಲಿ ಈ ಹಿಂದಿದ್ದ ಅಕೌಂಟ್ ಬಗ್ಗೆ ಖಚಿತಪಡಿಸಿಕೊಳ್ಳುತ್ತಿದ್ದರು.
ಮುಂದೆ ಅದೇ ವ್ಯಕ್ತಿಗಳ ಹೆಸರಿನಲ್ಲಿ ಮೊಬೈಲ್ ಸಂಖ್ಯೆ ಸಕ್ರಿಯಗೊಳಿಸುತ್ತಿದ್ದರು. ಇ-ವ್ಯಾಲೆಟ್ ಅಪ್ಲಿಕೇಷನ್‌ನಲ್ಲಿ ಮೊಬೈಲ್ ಸಂಖ್ಯೆಗೆ ಸಂಬಂಧಪಟ್ಟ ಹಿಂದಿನ ವ್ಯಕ್ತಿಯ ಹೆಸರನ್ನು ಪಡೆದ ನಂತರ ಆ ಹೆಸರಿನಲ್ಲಿರುವ ಪ್ಯಾನ್(PAN) ಸಂಖ್ಯೆಗಳ ವಿವರಗಳನ್ನು ರಿಟ್ರೀವ್ ಮಾಡುತ್ತಿದ್ದರು. ಅವುಗಳನ್ನು ಮತ್ತೆ ಇ -ವ್ಯಾಲೆಟ್ ಅಪ್ಲಿಕೇಷನ್‌ನಲ್ಲಿ ನಮೂದಿಸಿ, ಆ ವ್ಯಕ್ತಿಯ ಹೆಸರಿನಲ್ಲಿದ್ದ ಪ್ರೊಫೈಲ್ ಸಕ್ರಿಯಗೊಳಿಸುತ್ತಿದ್ದರು.
ಮೊಬೈಲ್ ಸಂಖ್ಯೆಗಳನ್ನು ಮತ್ತು ಇ -ವ್ಯಾಲೆಟ್‌ಗಳನ್ನು ರಾಜಸ್ಥಾನದಿಂದ ಕಾರ್ಯನಿರ್ವಹಿಸುತ್ತಿರುವ ಸೈಬರ್ ವಂಚಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಇವುಗಳನ್ನು ಸೈಬರ್ ವಂಚಕರು ದೇಶಾದ್ಯಂತ ವಂಚಿಸಲು ಮತ್ತು ಹಣ ಸುಲಿಗೆ ಮಾಡಲು ಉಪಯೋಗಿಸಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಬ್ ಏಜೆಂಟ್ ಆಸಿಫ್
ಸಿಮ್‌ಗಳನ್ನು ಆ್ಯಕ್ಟಿವೇಟ್ ಮಾಡಲು ಮುಜಾಹಿದ್‌ನ ಸಬ್ ಏಜೆಂಟ್ ಆಗಿ ಮೊತ್ತೊಬ್ಬ ಆರೋಪಿ ಆಸಿಫ್ ಕೆಲಸ ಮಾಡುತ್ತಿದ್ದ. ನಕಲಿ ದಾಖಲಾತಿಗಳನ್ನು ಸೃಷ್ಟಿಸಲು ಫೋಟೋಗಳನ್ನು ಮುಜಾಹಿದ್‌ಗೆ ಒದಗಿಸುತ್ತಿದ್ದ ಎಂದು ತನಿಖಾ ತಂಡದ ಅಧಿಕಾರಿಗಳು ತಿಳಿಸಿದ್ದಾರೆ.
ನಕಲಿ ಆಧಾರ್ ಕಾರ್ಡ್
ಆರೋಪಿ ಇಕ್ಬಾಲ್ ಕಂಪ್ಯೂಟರ್ ಪ್ರಿಂಟಿಂಗ್ ಹಾಗೂ ಜೆರಾಕ್ಸ್ ಅಂಗಡಿಯನ್ನು ಹೊಂದಿದ್ದ. ಮುಜಾಹಿದ್ ಮತ್ತು ಆಸಿಫ್ ಒದಗಿಸುತ್ತಿದ್ದ ಫೋಟೋಗಳ ಸಹಾಯದಿಂದ ನಕಲಿ ದಾಖಲಾತಿಗಳನ್ನು ಹಾಗೂ ಆಧಾರ್ ಕಾರ್ಡ್‌ಗಳನ್ನು ತಯಾರಿಸುತ್ತಿದ್ದನಂತೆ.
ಹರಿಯಾಣದಲ್ಲಿ ಅಂದರ್
ಮಾಹಿತಿಯನ್ನಾಧರಿಸಿ ಆರೋಪಿಗಳ ಬೆನ್ನತ್ತಿದ ಅಧಿಕಾರಿಗಳು, ಹರಿಯಾಣದಲ್ಲಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಬಂಧನದ ವೇಳೆ ಸ್ಥಳೀಯರು, ಆರೋಪಿಗಳಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಪೊಲೀಸರನ್ನು ತಡೆದಿದ್ದರು. ಸ್ಥಳೀಯರ ಪ್ರತಿರೋಧದ ನಡುವೆಯೂ ಸಿಐಡಿ ಸೈಬರ್ ಕ್ರೈಂ ಪೊಲೀಸರ ತಂಡ, ಆರೋಪಿಗಳನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತರುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ: ರಾಯಬಾಗದಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ಮಗು ನಾಪತ್ತೆ.. ಅಪಹರಣ ಶಂಕೆ