ಬೆಂಗಳೂರು : ಅಧಿಕಾರಕ್ಕೆ ಬರುವ ಮುನ್ನ ಕೇಂದ್ರ ಸರ್ಕಾರ ಸಾಕಷ್ಟು ನಿರೀಕ್ಷೆ ಮೂಡಿಸಿ, ಯುವಕರನ್ನು ವಂಚಿಸಿದೆ ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಅಭಿಪ್ರಾಯ ಪಟ್ಟಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ರೋಜ್ಗಾರ್ ಅಭಿಯಾನದ ಮುಖ್ಯ ಉದ್ದೇಶ ಯುವಕರನ್ನು ಆಧರಿಸಿ ಆಗಿದೆ. ಶೇ.65 ರಷ್ಟು ಯುವಕರನ್ನು ಹೊಂದಿರುವ ಯುವ ರಾಷ್ಟ್ರ ಇದು.
ಆದರೆ ಇಲ್ಲಿ ಹೆಚ್ಚಿನ ಯುವಕರು ಉದ್ಯೋಗವಿಲ್ಲದೇ ಬೀದಿ ಅಲೆಯುತ್ತಿದ್ದಾರೆ. ಕೇಂದ್ರದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಬಹುದೊಡ್ಡ ಉದ್ಯೋಗದ ಭರವಸೆ ನೀಡಿ ಅಧಿಕಾರಕ್ಕೆ ಬಂದರು. ಆದರೆ ಮಾತು ಈಡೇರಿಸಿಕೊಂಡಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗವನ್ನು ಯುವಕರಿಗಾಗಿ ನೀಡುತ್ತೇನೆ ಎಂದಿದ್ದರು. ನಿರೀಕ್ಷೆಯಂತೆ ಇಲ್ಲಿಗೆ 12 ಕೋಟಿ ಮಂದಿಗೆ ಉದ್ಯೋಗ ಕೊಡಬೇಕಿತ್ತು.
ಆದರೆ ಅಷ್ಟು ಮಂದಿಯ ಉದ್ಯೋಗವನ್ನು ನೋಟ್ ಬ್ಯಾನ್, ಗಬ್ಬರ್ ಸಿಂಗ್ ತೆರಿಗೆ ಮೂಲಕ ಆಯಿತು. ದೇಶಾದ್ಯಂತ ಕೊರೊನಾ ಕಾರಣಕ್ಕೆ 14 ಕೋಟಿ ಮಂದಿ ಉದ್ಯೋಗ ನಷ್ಟವಾಗಿದೆ. ಇದರ ಬಗ್ಗೆಯೂ ಉತ್ತರಿಸುವ ಬಾಯಿ ಕೇಂದ್ರ ಸರ್ಕಾರಕ್ಕೆ ಇಲ್ಲವಾಗಿದೆ ಎಂದರು.
ಹಿಂದೆಲ್ಲಾ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಘಟನೆ ಕಾಣುತ್ತಿದ್ದೆವು. ಆದರೆ ಉದ್ಯೋಗ ಸಿಗದೇ ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಉದ್ಯೋಗ ನೀಡುವುದಿರಲಿ, ಕೇಳಿದ ಯುವಕರಿಗೆ ಪಕೋಡಾ ಮಾರುವುದು ಸಹ ಉದ್ಯೋಗ ಅಂತ ಹೇಳಿ ಪ್ರಧಾನಿ ಹೇಳಿದ್ದರು. ಈ ದೇಶದಲ್ಲಿ ಪಾಲಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಲಕ್ಷಾಂತರ ಹಣ ವ್ಯಯಿಸಿ ಪಕೋಡಾ ಮಾರಲು ಕಳಿಸಲು ಸಾಧ್ಯವಾ? ಸರ್ಕಾರ ಯುವಕರ ಮಾತನ್ನು ಆಲಿಸುವ ಪರಿಜ್ಞಾನ ಇಲ್ಲದ ಸರ್ಕಾರ ರಾಜ್ಯದಲ್ಲಿದೆ.
ಇಲ್ಲಿ 35-40 ಲಕ್ಷ ಮಂದಿ ನಿರುದ್ಯೋಗಿಗಳಾಗಿದ್ದಾರೆ. ಸಂಕಷ್ಟಕರ ಪರಿಸ್ಥಿತಿ ದೊಡ್ಡ ಮಟ್ಟದಲ್ಲಿ ಎದುರಿಸುವ ಸ್ಥಿತಿ ಎದುರಾಗಿದೆ. ದೊಡ್ಡ ಮಟ್ಟದ ಉದ್ಯೋಗ ನಷ್ಟ ಬೆಂಗಳೂರಲ್ಲಾಗಿದೆ. ಸಾಕಷ್ಟು ಯುವಕರು ನಗರ ಬಿಟ್ಟು ತಮ್ಮ ತವರಿಗೆ ತೆರಳಿದ್ದಾರೆ. 22 ಲಕ್ಷಕ್ಕೂ ಅಧಿಕ ಮಂದಿಗೆ ಮೂರು ಹೊತ್ತು ಆಹಾರ ಸಿಗದ ಸ್ಥಿತಿಯಲ್ಲಿದ್ದಾರೆ ಎಂದರು.
ನವಿಲಿಗೆ ಕಾಳು ತಿನ್ನಿಸುವ ಒಂದೂವರೆ ನಿಮಿಷದ ವೀಡಿಯೊಗೆ 8 ಗಂಟೆ ನವಿಲಿಗೆ ತೊಂದರೆ ಕೊಡಲಾಗಿದೆ. ಆರು ಬಾರಿ ಮೋದಿ ಬಟ್ಟೆ ಬದಲಿಸಿದ್ದಾರೆ. ನವಿಲಿಗೆ ಮಾತ್ರವಲ್ಲ, ಬಡ ಜನರಿಗೂ ಹೊಟ್ಟೆಗೆ ತಿನ್ನಿಸುವ ಕಾರ್ಯ ಮಾಡಿ. ಸೂರ್ಯಗ್ರಹಣ ನೋಡಲು ವಿದೇಶದಿಂದ 2.5 ಲಕ್ಷ ರೂ. ಮೊತ್ತದ ಕನ್ನಡಕ ತರಿಸಿದ್ದರು. ಮೋಡ ಬಂದಿದ್ದರಿಂದ ನೋಡಲು ಸಾಧ್ಯವಾಗಿಲ್ಲ. ಜನರ ಸಮಸ್ಯೆ ನೋಡಲು ನಿಮಗೆ ಕನ್ನಡಕದ ಅವಶ್ಯಕತೆ ಇದ್ದರೆ ಅದೆಷ್ಟೇ ಹಣ ಖರ್ಚಾದರೂ ತರಿಸಿಕೊಡುತ್ತೇವೆ. ಕೇಂದ್ರ ಹಣಕಾಸು ಸಚಿವೆ ಜಿಎಸ್ಟಿ ಪರಿಹಾರ ಕೇಳಿದರೆ ಆ್ಯಕ್ಟ್ ಆಫ್ ಗಾಡ್ ಅನ್ನುತ್ತಿದ್ದಾರೆ.
ಅಸಲು ಇದು ಆ್ಯಕ್ಟ್ ಆಫ್ ವಿಜನ್ ಸಮಸ್ಯೆ ಈ ಸರ್ಕಾರಕ್ಕೆ ಯಾವುದೇ ವಿಷಯ್ ಇಲ್ಲ. ಇದು ಟೆಲಿವಿಜನ್ ಸರ್ಕಾರ ಎಂದು ಹೀಯಾಳಿಸಿದರು. ನಮ್ಮ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಕೇಂದ್ರ ಸರ್ಕಾರಕ್ಕೆ ಕೋವಿಡ್ ಹೆಚ್ಚಳದ ಬಗ್ಗೆ ಎಚ್ಚರಿಕೆ ನೀಡಿದ್ದರು, ಅದಕ್ಕೆ ಬೆಲೆ ಕೊಡಲಿಲ್ಲ. ಸಿಬ್ಬಂದಿ, ಅಧಿಕಾರಿ ನೇಮಿಸುವ ಕಾರ್ಯ ಕೂಡ ಕೇಂದ್ರ ಸರ್ಕಾರದಿಂದ ಸಾಧ್ಯವಾಗಿಲ್ಲ. ಯಾವುದೇ ಸಂದರ್ಭದಲ್ಲಿಯೂ ಕೇಂದ್ರ ಸರ್ಕಾರ ಯುವಕರ ಉದ್ಯೋಗ ನೀಡಿಕೆಗೆ ಯೋಜನೆ ರೂಪಿಸಬಹುದು. ನಮ್ಮ ನ್ಯಾಯ ಯೋಜನೆಯ ಹೆಸರನ್ನು ಬೇಕಾದರೆ ಬದಲಿಸಿಕೊಂಡು ಯುವಕರಿಗೆ ಹಣ ನೀಡುವ ಕೆಲಸ ಮಾಡಿ ಎಂದರು.