ಬೆಂಗಳೂರು : ಈ ಬಾರಿ ನಗರದಲ್ಲಿ 1.75 ಲಕ್ಷ ಸಸಿ ನೆಡಲು ಸಿದ್ಧತೆ ನಡೆಸಲಾಗಿದೆ ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ತಿಳಿಸಿದರು.
ವಿಶ್ವ ಪರಿಸರ ದಿನಾಚರಣೆ ದಿನದ ಅಂಗವಾಗಿ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಗಿಡ ನೆಟ್ಟು ಮಾತನಾಡಿದ ಮೇಯರ್ ಗಂಗಾಂಬಿಕೆ, ಕೇವಲ ಸಸಿ ನೆಡುವ ಕಾಳಜಿ ತೋರಿಸಿದರೆ ಸಾಲದು. ಪರಿಸರ ಪ್ರೇಮ, ಕಾಳಜಿ ಸದಾ ಇರಬೇಕು. ಈಗಾಗಲೇ ನಗರಾದ್ಯಂತ ಹಲವಾರು ಸಂಘ ಸಂಸ್ಥೆಗಳು, ಗುಂಪುಗಳು ಬಹುತೇಕ ಸಸಿ ನೆಡುತ್ತಿದ್ದಾರೆ. ಸಸಿ ನೆಟ್ಟು ಸುಮ್ಮನಾದರೆ ಸಾಲದು. ಅದು ಒಂದು ಹಂತದ ವರೆಗೆ ಬೆಳೆಯುವವರೆಗೆ ಪೋಷಣೆ ಮಾಡಬೇಕು ಎಂದರು.
ಇನ್ನು ಆಯುಕ್ತರಾದ ಎನ್.ಮಂಜುನಾಥ್ ಪ್ರಸಾದ್ ಮಾತನಾಡಿ, ಬಿಬಿಎಂಪಿ ನರ್ಸರಿಗಳಲ್ಲಿ 2.50 ಲಕ್ಷ ಸಸಿಗಳಿದ್ದು, ಈ ಬಾರಿಯ ಮಳೆಗಾದಲ್ಲಿ 1.75 ಲಕ್ಷ ನೆಡಲು ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ. ನಗರಾದ್ಯಂತ ಸಸಿ ನೆಡುವ ಉದ್ದೇಶದಿಂದ ಬಿಬಿಎಂಪಿ ಗ್ರೀನ್ ಆ್ಯಪ್ ಮೂಲಕ ಸಸಿ ನೆಡಲು ಯೋಜನೆ ರೂಪಿಸಲಾಗಿತ್ತು. ಅದರಂತೆ ಬಿಬಿಎಂಪಿ ವತಿಯಿಂದ ನೆಟ್ಟಿರುವ ಹಾಗೂ ಸಾರ್ವಜನಿಕರಿಗೆ ಸಸಿ ಉಚಿತವಾಗಿ ವಿತರಣೆ ಮಾಡಿರುವ ಸಸಿಗಳು ಸೇರಿ ಇದುವರೆಗೆ 6.50 ಲಕ್ಷ ಸಸಿ ವಿತರಿಸಲಾಗಿದೆ ಎಂದು ತಿಳಿಸಿದರು.
ನಗರದ 198 ವಾರ್ಡ್ಗಳಲ್ಲಿ ಮರ ಗಣತಿ ಮಾಡಲು ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ಅರಣ್ಯ ವಿಭಾಗದ ಅಧಿಕಾರಿಗಳಿಗೆ ತ್ವರಿತವಾಗಿ ಮರ ಗಣತಿ ಪ್ರಾರಂಭಿಸುವಂತೆ ಸೂಚನೆ ನೀಡಲಾಗಿದೆ ಎಂದರು.