ಬೆಂಗಳೂರು: ಐಎಎಸ್, ಐಪಿಎಸ್ ಸೇರಿದಂತೆ 30ಕ್ಕೂ ಹೆಚ್ಚು ಅಧಿಕಾರಿಗಳ ಫೋಟೋ ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಫೇಕ್ ಅಕೌಂಟ್ ಸೃಷ್ಟಿಸಿ ಹಣ ವಸೂಲಿ ಮಾಡುತ್ತಿದ್ದ ನಾಲ್ಕು ಮಂದಿ ವಂಚಕರನ್ನು ಸಿಐಡಿ ಸೈಬರ್ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನದ ಭರತ್‌ಪುರ ನಿವಾಸಿಗಳಾದ ಸದ್ದಾಂ, ಅನ್ಸರ್ ಸೇರಿದಂತೆ ನಾಲ್ಕು ಮಂದಿಯನ್ನ ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಆದರೆ, ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾಜಸ್ಥಾನದಲ್ಲಿ ಮೊಬೈಲ್ ಅಂಗಡಿ ಕೆಲಸ ಮಾಡುತ್ತಿದ್ದ ಪ್ರಮುಖ ಆರೋಪಿ, ಸಹಚರರನ್ನು ಒಗ್ಗೂಡಿಸಿಕೊಂಡು ವ್ಯವಸ್ಥಿತವಾಗಿ ನಕಲಿ ಖಾತೆಗಳನ್ನು ತೆರೆಸುತ್ತಿದ್ದ.
ಕಳೆದ ಎರಡು-ಮೂರು ತಿಂಗಳಿಂದ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ಖಾತೆಯಿಂದ ಭಾವಚಿತ್ರವನ್ನು ಸೋಷಿಯಲ್ ಮೀಡಿಯಾ ಮೂಲಕ ಡೌನ್ಲೋಡ್ ಮಾಡಿಕೊಳ್ಳುತ್ತಿದ್ದ ಆರೋಪಿಗಳು ನಕಲಿ ಖಾತೆ ತೆರೆದು ಅದೇ ಅಕೌಂಟ್ನಿಂದಲೇ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದರು. ಬಳಿಕ ಆರ್ಥಿಕ ಸಂಕಷ್ಟದಲ್ಲಿದ್ದೇನೆ. ನಿಮ್ಮಿಂದ ಹಣದ ಸಹಾಯಬೇಕು ಎಂದು ಸಂದೇಶ ಕಳುಹಿಸುತ್ತಿದ್ದರು. ರಾಜಸ್ಥಾನದಲ್ಲಿ ತೆರೆಯಲಾಗಿದ್ದ ಬ್ಯಾಂಕ್ ಖಾತೆ ನಂಬರ್ ನೀಡಿ ಹಣ ಪಡೆದುಕೊಳ್ಳುತ್ತಿದ್ದರು.
ಆರಂಭದಲ್ಲಿ ಪಿಎಸ್ಐ ಫೋಟೋ ಹಾಕಿ ಸೋಷಿಯಲ್ ಮೀಡಿಯಾದಲ್ಲಿ ಹಣ ಹಾಕಿ ವಂಚಿಸುತ್ತಿದ್ದರು. ನಂತರ ಐಪಿಎಸ್ ಅಧಿಕಾರಿಗಳಾದ ಪಿ.ಹರಿಶೇಖರನ್, ಚಂದ್ರಗುಪ್ತ ವಿವಿಧ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಖಾತೆ ತೆರೆಯಲಾಗಿತ್ತು ಎಂದು ತಿಳಿದು ಬಂದಿದೆ.
ಡಿಜಿ ಪ್ರವೀಣ್ ಸೂದ್ ಹೆಸರಿನಲ್ಲಿ ನಕಲಿ ಖಾತೆ
ರಾಜ್ಯ ಪೊಲೀಸ್ ಇಲಾಖೆಯ ಡಿಜಿ ಪ್ರವೀಣ್ ಸೂದ್ ಹಾಗೂ ಕೆಲ ಎಡಿಜಿಪಿಗಳ ಹೆಸರಿನಲ್ಲಿ ನಕಲಿ ಖಾತೆ ತೆರೆಯಲಾಗಿತ್ತು. ಅಲ್ಲದೆ ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ನೆರೆ ರಾಜ್ಯಗಳ ಐಪಿಎಸ್ ಹಾಗೂ ಐಎಎಸ್ ಅಧಿಕಾರಿಗಳ ಹೆಸರನ್ನು ಆರೋಪಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.