ಬೆಂಗಳೂರು: ನೋವೆಲ್ ಕೊರೊನಾ ವೈರಸ್ನಿಂದ ಹಿಡಿದು ಸೋಂಕಿಗೆ ನೀಡುವ ವ್ಯಾಕ್ಸಿನ್ ತನಕ ಎಲ್ಲವೂ ಇನ್ನು ಅಧ್ಯಯನ ಹಂತದಲ್ಲೇ ಇದೆ. ಯಾವುದಕ್ಕೂ ನಿರ್ದಿಷ್ಟವಾದ ವ್ಯಾಖ್ಯಾನ ಇಲ್ಲ, ದಿನವೂ ಹೊಸ ಅನ್ವೇಷಣೆ ನಡೆಯುತ್ತಲೇ ಇದೆ. ಕೋವಿಡ್ ಸಂಕಷ್ಟದ ಮಧ್ಯೆ ಹತ್ತು ಹಲವು ಅಧ್ಯಯನಗಳು ನಡೆಯುತ್ತಿದೆ. ಸದ್ಯ ರಾಜಧಾನಿಯ ಪ್ರತಿಷ್ಠಿತ ಆಸ್ಪತ್ರೆಯಿಂದ ಲಸಿಕೆ ಕುರಿತು ನಡೆಸಲಾದ ಮಹತ್ವದ ಅಧ್ಯಯನವೊಂದು ಹೊರ ಬಂದಿದೆ.
ಬ್ರೇಕ್ ಥ್ರೂ ಇನ್ಫೆಕ್ಷನ್ ಮಧ್ಯೆ ಲಸಿಕೆ ಪ್ರತಿಕಾಯ ಶಕ್ತಿ ಕುರಿತು ಅಧ್ಯಯನವನ್ನ ಜಯದೇವ ಆಸ್ಪತ್ರೆ ನಡೆಸಿದೆ. ಆಸ್ಪತ್ರೆಯ 250 ಆರೋಗ್ಯ ಕಾರ್ಯಕರ್ತರ ಮೇಲೆ ಅಧ್ಯಯನ ನಡೆಸಿದ್ದು, ಹಲವು ಮಹತ್ವದ ವಿಚಾರ ಬಹಿರಂಗವಾಗಿದೆ.
ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ರ ನೇತೃತ್ವದಲ್ಲಿ ಮೈಕ್ರೋ ಬಯಾಲಜಿ ವಿಭಾಗದ ಡಾ.ನವೀನ್, ಡಾ.ನಂದಿನಿ, ಡಾ.ಕವಿತಾ ಅವರಿಂದ ಎಲಿಸಾ ಟೆಸ್ಟ್ ವಿಧಾನ ಬಳಸಿ ಅಧ್ಯಯನ ನಡೆಸಲಾಗಿದೆ. ಫೆಬ್ರವರಿ ತಿಂಗಳಲ್ಲಿ 2 ನೇ ಡೋಸ್ ಕೋವಿಶೀಲ್ಡ್ ಪಡೆದ ಪುರುಷ, ಮಹಿಳಾ ಆರೋಗ್ಯ ಕಾರ್ಯಕರ್ತರು ಸರಿ ಪ್ರಮಾಣದಲ್ಲಿ ಭಾಗಿಯಾಗಿದ್ದಾರೆ.
ಲಸಿಕೆ ಶಕ್ತಿ ಅಲ್ಪ ಕಾಲ..?:
ಅಂದಹಾಗೇ, 250 ಕಾರ್ಯಕರ್ತರ ಪೈಕಿ ಶೇಕಡಾ 80ರಷ್ಟು ಕಾರ್ಯಕರ್ತರಲ್ಲಿ ಲಸಿಕೆ ಉತ್ತಮ ಫಲಿತಾಂಶ ಸಿಕ್ಕಿದೆ. ಏಪ್ರಿಲ್ ನಲ್ಲಿ ನಡೆಸಿದ್ದ ಆ್ಯಂಟಿಬಾಡಿ ಟೆಸ್ಟ್ ವೇಳೆ ಶೇ 80 ಮಂದಿಯ ಪ್ರತಿಕಾಯ ಶಕ್ತಿ ವೃದ್ಧಿಯಾಗಿರುವುದು ಪತ್ತೆಯಾಗಿದೆ. ಎರಡನೇ ಬಾರಿ ನಡೆಸಲಾದ ಆ್ಯಂಟಿಬಾಡಿ ಪರೀಕ್ಷೆಯಲ್ಲಿ ಶೇಕಡಾ 99ರಷ್ಟು ಮಂದಿಯಲ್ಲಿ ಪ್ರತಿಕಾಯ ಶಕ್ತಿ ಉತ್ತಮಗೊಂಡಿರುವುದು ಕಂಡು ಬಂದಿದೆ. ಏಪ್ರಿಲ್ ನಲ್ಲಿ ಆ್ಯಂಟಿಬಾಡಿ ಟೆಸ್ಟ್ ವೇಳೆ ಕಮ್ಮಿ ಪ್ರತಿಕಾಯ ಶಕ್ತಿ ಹೊಂದಿದ್ದವರಿಗೆ ಸೆಪ್ಟೆಂಬರ್ ತಿಂಗಳಲ್ಲಿ ಪ್ರತಿಕಾಯ ಶಕ್ತಿ ಹೆಚ್ಚಳವಾಗಿದೆ.
'ಲಸಿಕೆ ಶಕ್ತಿ ಅಲ್ಪ ಕಾಲ' ಎಂಬ ಚರ್ಚೆಯ ಮಧ್ಯೆ ಅಧ್ಯಯನದಿಂದ ಮಹತ್ವದ ಅಂಶ ಬಯಲಾಗಿದೆ. ಲಸಿಕೆ ಪಡೆದ ಕೆಲವರಲ್ಲಿ ತಿಂಗಳುಗಳ ನಂತರ ಆ್ಯಂಟಿಬಾಡಿ ಹೆಚ್ಚಳಗೊಂಡಿರುವುದು ಗೊತ್ತಾಗಿದೆ.
ಡಿಲೇಡ್ ರೆಸ್ಪಾಂಡರ್ಸ್ ( delayed responders) ಲಸಿಕೆ ಪಡೆದು ಎರಡು ಮೂರು ತಿಂಗಳ ನಂತರ ಯಾರಲ್ಲಿ ಆ್ಯಂಟಿಬಾಡಿ ಉತ್ಪತ್ತಿ ಆಗುತ್ತೊ ಅವರೇ ಡಿಲೇಡ್ ರೆಸ್ಪಾಂಡರ್ಸ್ ಅಂತ ಕರೆಯಲಾಗುತ್ತೆ. ಜಯದೇವ ಆಸ್ಪತ್ರೆಯ ಅಧ್ಯಯನದಿಂದ ಒಬ್ಬೊಬ್ಬರ ದೇಹ ಲಸಿಕೆಗೆ ಒಂದೊಂದು ರೀತಿ ಪ್ರತಿಕ್ರಿಯಿಸುವ ಅಂಶ ಬೆಳಕಿಗೆ ಬಂದಿದೆ.
ಸೋಂಕು ತಗುಲಿ ಲಸಿಕೆ ಪಡೆದವರಲ್ಲಿ ಅತ್ಯುತ್ತಮ ಆ್ಯಂಟಿಬಾಡಿ ಉತ್ಪತ್ತಿಯಾಗಿದ್ದರೆ, ಸೋಂಕು ಬಾರದವರಿಗಿಂತ, ಸೋಂಕು ಬಂದ ಮೇಲೆ ಲಸಿಕೆ ಪಡೆದವರಲ್ಲಿ ಶೇಕಡಾ 99ರಷ್ಟು ಆ್ಯಂಟಿಬಾಡಿ ಪತ್ತೆಯಾಗಿದೆ. ಇನ್ನು ಎರಡು ಡೋಸ್ ಲಸಿಕೆ ಅಂತರದ ಬಗ್ಗೆಯೂ ಮಹತ್ವದ ಅಂಶ ಬಯಲು ಆಗಿದ್ದು, ಎರಡು ಡೋಸ್ ಲಸಿಕೆ ಮಧ್ಯೆ 4 ವಾರಗಳ ಅಂತರ ಹೆಚ್ಚು ಎಫೆಕ್ಟೀವ್ ಅಂತ ಹೇಳಲಾಗುತ್ತಿದೆ.
ಎರಡು ಡೋಸ್ ಲಸಿಕೆ 4 ವಾರಗಳ ಅಂತರದಲ್ಲಿ ಪಡೆದ ಮಂದಿಯಲ್ಲಿ ಉತ್ತಮ ಪ್ರತಿಕಾಯ ಶಕ್ತಿ ಪತ್ತೆಯಾಗಿದೆ. ಹೀಗಾಗಿ, ಎರಡು ಡೋಸ್ ಲಸಿಕೆ ಅಂತರ ಇಳಿಕೆ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.12 ವಾರಗಳಿಂದ 4 ಅಥವಾ 6 ವಾರಗಳಿಗೆ ಅಂತರ ಇಳಿಕೆ ಮಾಡುವಂತೆ ಸಲಹೆ ಬಂದಿದೆ.
ಇನ್ನು ಅಧ್ಯಯನದಲ್ಲಿ ಬೂಸ್ಟರ್ ಡೋಸ್ ಬಗ್ಗೆಯೂ ಪ್ರಸ್ತಾಪ ನಡೆದಿದ್ದು, ಬೂಸ್ಟರ್ ಡೋಸ್ ಅಗತ್ಯತೆ ಇಲ್ಲ ಎಂದು ಅಭಿಪ್ರಾಯ ಕೇಳಿ ಬಂದಿದೆ. ಹಾಗೇ ಲಸಿಕೆ ಶಕ್ತಿ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಲಿ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ. ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಮೂರನೇ ಅಲೆ ಅಪ್ಪಳಿಸುವ ಸಾಧ್ಯತೆಯಿದ್ದು, ಈ ಹೊತ್ತಿನೊಳಗೆ ಹೆಚ್ಚೆಚ್ಚು ಜನ ಲಸಿಕೆ ಪಡೆದು ಸೋಂಕಿನಿಂದ ಪಾರಾಗಲು ಮನವಿ ಮಾಡಿದ್ದಾರೆ.
ಅವಧಿ ಇಳಿಕೆ ಬಗ್ಗೆ ಚಿಂತನೆ ಮಾಡುತ್ತಾ ಸರ್ಕಾರ: ಲಸಿಕಾ ಅವಧಿ ಇಳಿಕೆ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇರುವುದಿಲ್ಲ. ವ್ಯಾಕ್ಸಿನೇಷನ್ ಸಂಶೋಧನಾ ಹಂತದಲ್ಲಿ ಇರುವುದರಿಂದ ಕೇಂದ್ರದ ಆರೋಗ್ಯ ಇಲಾಖೆ ತಜ್ಞರು ತಿಳಿಸಿದರಷ್ಟೇ ಅವಧಿ ಇಳಿಕೆ ಮಾಡಲಾಗುತ್ತೆ. ಇನ್ನು ಜಯದೇವ ಆಸ್ಪತ್ರೆ ನಡೆಸಿರುವ ಈ ಅಧ್ಯಯನದ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಾ? ಕೇಂದ್ರಕ್ಕೆ ಮಾಹಿತಿ ನೀಡುತ್ತಾ ಕಾದು ನೋಡಬೇಕು.