ಬೆಂಗಳೂರು: ವಿದ್ಯುತ್ ಚಾಲಿತ ವಾಹನ ತಯಾರಕ ಟೆಸ್ಲಾ ಕಾರ್ಖಾನೆ ರಾಜ್ಯದಲ್ಲಿ ಸ್ಥಾಪನೆ ಆಗುವ ಸಂಬಂಧ ಸರ್ಕಾರ ಸಂಸ್ಥೆಯೊಂದಿಗೆ ಪ್ರಾಥಮಿಕ ಹಂತದ ಮಾತುಕತೆಯಲ್ಲಿದೆ ಎಂದು ಈಟಿವಿ ಭಾರತಕ್ಕೆ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.
ಪ್ರಾಥಮಿಕ ಹಂತದಲ್ಲಿ ರಾಜ್ಯ ಸರ್ಕಾರವನ್ನ ಕೈಗಾರಿಕೆ ಹಾಗೂ ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ಪ್ರತಿನಿಧಿಸುತ್ತಿದ್ದು, ಮೂಲಗಳು ಹೇಳುವ ಪ್ರಕಾರ ಬೆಂಗಳೂರಿನಲ್ಲಿ ಅಥವಾ ಸುತ್ತಮುತ್ತ ಟೆಸ್ಲಾ ಸಂಸ್ಥೆಯ R&D ಕೇಂದ್ರಕ್ಕೆ ಹಾಗೂ ಕಾರು, ಬ್ಯಾಟರಿ ತಯಾರಿಸುವ ಕೈಗಾರಿಕೆಗೆ ಜಾಗ ನೀಡಲಿದೆ ಎಂದು ತಿಳಿದು ಬಂದಿದೆ.
ಜೊತೆಗೆ ನಗರ ಏಥರ್ ಎನರ್ಜಿ, ಬಾಷ್ ಹಾಗೂ ಇನ್ನಿತರೆ ವಿದ್ಯುತ್ ಚಾಲಿತ ವಾಹನಗಳ ಕೇಂದ್ರವಾಗಿದ್ದು, ಹವಾಮಾನ ಸೇರಿದಂತೆ ಹಲವು ಕಾರಣಗಳಿಂದ ಟೆಸ್ಲಾ ರಾಜ್ಯದಲ್ಲಿ ಕಾರ್ಖಾನೆ ಪ್ರಾರಂಭಿಸಬಹುದು ಎಂದು ಅಂದಾಜಿಸಲಾಗಿದೆ.
ಇದಕ್ಕೆ ಪೂರಕವಾಗಿ ಟ್ವಿಟರ್ನಲ್ಲಿ "Tesla for India" ಖಾತೆಯಲ್ಲಿ ಎರಡು ಟಿ ಶರ್ಟ್ ಫೋಟೋ ಹಾಕಿ "India loves Tesla" "India wants Tesla"ಗೆ ಪ್ರತಿಕ್ರಿಯೆ ನೀಡಿದ ಟೆಸ್ಲಾ ಸ್ಥಾಪಕ ಎಲಾನ್ ಮಸ್ಕ್ "Next year for sure" (ಮುಂದಿನ ವರ್ಷ ಪಕ್ಕಾ) ಎಂದಿದ್ದಾರೆ.
ಸರ್ಕಾರ ಎಲ್ಲಾ ರೀತಿ ಸಹಾಯ ಮಾಡಲು ತಯಾರಿದೆ. ಸದ್ಯಕ್ಕೆ ಇದು ಕೇವಲ ಪ್ರಾಥಮಿಕ ಹಂತದ ಮಾತುಕತೆ ಎಂದು ಈಟಿವಿ ಭಾರತಕ್ಕೆ ಸಚಿವ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದಾರೆ.